ಚೌಗಲೆ ಹಲ್ಲೆಗೆ ಯತ್ನಿಸಿದ ಮೇಲೆ 21 ಮಂದಿಗೆ ನೋಟಿಸ್‌..!

ಮಲ್ಪೆ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣದ ಆರೋಪಿ ಪ್ರವೀಣ್‌ ಚೌಗಲೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ 21 ಮಂದಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿದ ಅನಂತರ ಪೊಲೀಸರು ನ. 16ರಂದು ಆರೋಪಿಯನ್ನು ಸಂತ್ರಸ್ತರ ಮನೆಗೆ ಕರೆ ತಂದಿದ್ದರು. ಅ ವೇಳೆ ಮನೆ ಸಮೀಪದಲ್ಲಿ ಜಮಾಯಿಸಿದ ಸ್ಥಳೀಯರು ಆಕ್ರೋಶಿತಗೊಂಡು ಆರೋಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರೂ, ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಚ್‌ ಮಾಡಬೇಕಾಗಿ ಬಂದಿತ್ತು. ಪೊಲೀಸರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈಗಾಗಲೇ ಮೂವರನ್ನು ವಿಚಾರಣೆ ಮಾಡಲಾಗಿದೆ. ಇನ್ನುಳಿದವರನ್ನೂ ಠಾಣೆಗೆ ಕರೆದು ವಿಚಾರಿಸಲಾಗುವುದು ಎಂದು ಮಲ್ಪೆ ಠಾಣಾಧಿಕಾರಿ ತಿಳಿಸಿದ್ದಾರೆ. ಆರೋಪಿಯನ್ನು ಸಂತ್ರಸ್ತರ ನಿವಾಸಕ್ಕೆ ಕರೆ ತಂದಾಗ “ಸ್ಥಳೀಯರು ಆತನ ಕೊಲೆ ಮಾಡುವ ಸುವರ್ಣ ಅವಕಾಶವನ್ನು ಕಳೆದುಕೊಂಡಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.  

Leave a Reply