Visitors have accessed this post 1064 times.
ಮಂಗಳೂರು: ನಗರದಲ್ಲಿ ಕೇರಳದ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿರುವ ಪ್ರಕರಣದಲ್ಲಿ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿ ಸಂದೇಶ್ (28) ಪ್ರಶಾಂತ್ (31) ಮತ್ತು ರೋನಿತ್ (31) ಬಂಧಿತ ಆರೋಪಿಗಳು. ಡಿಸೆಂಬರ್ 21ರಂದು ಮಧ್ಯಾಹ್ನ 1ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಹಂಪನಕಟ್ಟೆಯ ಗುಡ್ ಟೈಮ್ ಶಾರ್ಟ್ ಈಟ್ಸ್ ಶಾಪ್ ಬಳಿ ಕೇರಳದ ಯುವಕ ಮತ್ತು ಯುವತಿಯನ್ನು ಸಂದೇಶ್ ಎಂಬಾತ ತಡೆದಿದ್ದಾನೆ. ಯುವಕ ಮುಸ್ಲಿಂ ಹಾಗೂ ಹಿಂದೂ ಯುವತಿ ಎಂದು ಪರಿಶೀಲಿಸುವ ನೆಪದಲ್ಲಿ ಅವರ ಮೇಲೆ ಕೂಗಾಡಿ ಐಡಿ ಕಾರ್ಡ್ ಕೇಳಿದ್ದಾನೆ. ಈ ಸಂದರ್ಭ ಯುವಕ ಹಾಗೂ ಯುವತಿ ಆಟೋ ರಿಕ್ಷಾವನ್ನು ಹತ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದಾರೆ. ಆಗ ಆಟೋ ನಿಲ್ಲಿಸಲು ಯತ್ನಿಸಿದ ಸಂದೇಶ್ ಆಟೋ ಚಾಲಕನಿಗೂ ಗದರಿಸಿದ್ದಾನೆ. ಅಷ್ಟರಲ್ಲಿ ಇನ್ನಿಬ್ಬರು ಮಧ್ಯ ಪ್ರವೇಶಿಸಿದ್ದಾರೆ. ತಮ್ಮನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಹೇಳಿದಂತೆ ಆಟೋ ಚಾಲಕ ಅವರನ್ನು ಅಲ್ಲಿಗೆ ತಲುಪಿಸಿದ್ದಾರೆ. ಬಳಿಕ ಆಟೋ ಚಾಲಕನು ನೀಡಿದ ದೂರಿನನ್ವಯ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.