ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಬಾವಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟ ಯುವತಿಯನ್ನು ಜಿ.ಹೊಸಳ್ಳಿ ಗ್ರಾಮದ ಕೃಷ್ಣಮೂರ್ತಿಪುತ್ರಿ ಸೃಷ್ಟಿ (19) ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲ್ಲೂಕು ಗೋಣಿಬೀಡು ಠಾಣೆ ವ್ಯಾಪ್ತಿಯ ಜಿ.ಹೊಸಳ್ಳಿ ಗ್ರಾಮದಲ್ಲಿ ಸೃಷ್ಟಿ ನಾಪತ್ತೆಯಾಗಿದ್ದಳು. ನಾಪತ್ತೆಯಾದಾಗಿನಿಂದ ಸ್ಥಳೀಯರು ಸೇರಿ ಹುಡುಕಾಟ ನಡೆಸಿದ್ದು ಗ್ರಾಮದ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಸೃಷ್ಟಿ ಹಾಸನದ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದರು. ಕಳೆದ ವಾರ ಮನೆಗೆ ಬಂದಿದ್ದ ಸೃಷ್ಟಿ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಳು. ಸೃಷ್ಟಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು ಆದರೆ ಪತ್ತೆಯಾಗಿರಲಿಲ್ಲ. ಗ್ರಾಮದ ಕುಡಿಯುವ ನೀರಿನ ಮೋಟರ್ ಅಳವಡಿಸಿರುವ ಬಾವಿಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ವಾಟರ್ ಮ್ಯಾನ್ ಗಮನಿಸಿ ಮಾಹಿತಿ ನೀಡಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದು ಶವವನ್ನು ಮೇಲೆತ್ತಲು ತಯಾರಿ ನಡೆಸಲಾಗಿದೆ.