
ಉಡುಪಿ: ಮುಸ್ಲಿಂ ಸಮುದಾಯದ ವಿರುದ್ಧ ಕೋಮು ಪ್ರಚೋದಕ ಹೇಳಿಕೆ ನೀಡಿ ಸಾರ್ವಜನಿಕರ ನಡುವೆ ದ್ವೇಷ ಬಿತ್ತುವ ಯತ್ನ ನಡೆಸಿದ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಪಿಸಿಆರ್ ಕರ್ನಾಟಕ ಬಾಪ್ಟರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೇಂಗ್ರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಿಧಿಸಲಾಗಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಜನರ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವ ಕುರಿತಾಗಿತ್ತು. ಈ ಹೇಳಿಕೆ ಯನ್ನು ಉಲ್ಲೇಖಿಸಿ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಕಾರುವ ಹೇಳಿಕೆ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ರಾಜ್ಯದಲ್ಲಿ ಕೋಮು ದ್ವೇಷದ ಭಾಷಣ ಮಾಡಿ ಶಾಂತಿ ಸುವ್ಯವಸ್ಥೆ ಕದಡುವ ನಿರಂತರ ಪ್ರಯತ್ನದಲ್ಲಿದ್ದು ಈ ಮುಂಚೆಯೂ ಕೂಡ ಅವರ ಹಲವು ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಅವರು ಪೊಲೀಸ್ ಮಹಾನಿರ್ದೇಶಕರಿಗೆ ಮನವಿಯಲ್ಲಿ ತಿಳಿಸಿದ್ದಾರೆ. ಇದೀಗ ಮತ್ತೊಮ್ಮೆ ಸಂವಿಧಾನ ಕೊಟ್ಟ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರದ ಕುರಿತು ಆಧಾರ ರಹಿತವಾಗಿ ಮಾತನಾಡುತ್ತ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ ಕುರಿತು ಮಾನಹಾನಿಕಾರ ಹೇಳಿಕೆ ನೀಡಿದ್ದು, ಇಡೀ ಮುಸ್ಲಿಂ ಸಮುದಾಯ ಮತ್ತು ಮಹಿಳೆಯರ ಕುರಿತು ದ್ವೇಷ ಕಾರುವ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆಗಳನ್ನು ನೀಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದವರು ಹೇಳಿದ್ದಾರೆ.


