
ಉಡುಪಿಯ ನೇಜಾರುವಿನಲ್ಲಿ ನಡೆದಿದ್ದ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಪೊಲೀಸ್ ತನಿಖೆ ಬಹುತೇಕ ಪೂರ್ಣಗೊಂಡಿದ್ದು , ವಾರದೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ.ಹೇಳಿದ್ದಾರೆ. ಕೃತ್ಯ ನಡೆದ ದಿನದಿಂದ 90 ದಿನಗಳೊಳಗೆ ಪೊಲೀಸರು ಪ್ರಕರಣದ ತನಿಖೆ ಪೂರ್ಣಗೊಳಿಸಿ ಮೊದಲ ಹಂತದ ಚಾರ್ಜ್ ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಈಗಾಗಲೇ ತನಿಖೆ ಪೂರ್ಣಗೊಂಡಿದ್ದು ಎಫ್ ಎಸ್ ಎಲ್ ವರದಿ ಬಂದಿದೆ.ಉಳಿದ ವರದಿಗಳು ಶೀಘ್ರ ಬರಲಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ನೇಜಾರು ತೃಪ್ತಿ ಲೇಔಟ್‌ನ ನೂರ್ ಮುಹಮ್ಮದ್ ಎಂಬವರ ಪತ್ನಿ ಹಸೀನಾ (48) ಹಾಗೂ ಅವರ ಪುತ್ರಿಯರಾದ ಅಫ್ನಾನ್(23) ಮತ್ತು ಅಯ್ನಾಝ್ (21) ಹಾಗೂ ಪುತ್ರ ಆಸೀಮ್(13) ಎಂಬವರನ್ನು ಮಂಗಳೂರಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಉದ್ಯೋಗಿಯಾಗಿದ್ದ ಪ್ರವೀಣ್ ಚೌಗುಳೆ 2023ರ ನವೆಂಬರ್12ರಂದು ಹಾಡುಹಗಲೇ ಮನೆಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ.


