
ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಬಾನೊಟ್ಟು ಶಾಂಭವಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ವ ಮರಳು ಅಡ್ಡೆಗೆ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂದರ್ಭ ಆರೋಪಿಗಳು ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಮೂರು ದೋಣಿಗಳನ್ನು ಹಾಗೂ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಏಕಾಏಕಿ ದಾಳಿ ನಡೆಸಿದಾಗ ಆರೋಪಿಗಳು ಸಿನಿಮೀಯ ರೀತಿಯಲ್ಲಿ ನದಿಯಲ್ಲಿ ದೋಣಿಯನ್ನು ಮುಳುಗಿಸಿಟ್ಟು ಪರಾರಿಯಾಗಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು, ಕರ್ನೀರೆ , ಬಳ್ಕುಂಜೆ,ಏಳಿಂಜೆ,ಪರಿಸರದಲ್ಲಿ ರಾತ್ರೋರಾತ್ರಿ ಎಗ್ಗಿಲ್ಲದೆ ಪಕ್ಷಭೇದ ಮರೆತು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಕೂಡಲೇ ಗಣಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅಕ್ರಮವನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


