
ಮಂಗಳೂರು : ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗಿದ್ದು, ಸಂಸದನಾಗಿ ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ಎಂದು ಎನ್ಎಸ್ ಯುಐ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಮನೆಗೆ ಮುತ್ತಿಗೆ ಯತ್ನ ನಡೆಸಿದ್ದಾರೆ. ಈ ವೇಳೆ ಎನ್‍ಎಸ್‍ಯುಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕಾರ್ಯಕರ್ತರು ನಳಿನ್ ಕುಮಾರ್ ಕಟೀಲ್ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆ ಕೂಗಿದ ಎನ್‍ಎಸ್‍ಯುಐ ಕಾರ್ಯಕರ್ತರು ಕಟೀಲ್ ಮನೆ ಮುಂದೆ ಭಾರೀ ಹೈಡ್ರಾಮಾ ಮಾಡಿದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಕಟೀಲ್ ಮನೆಗೆ ನುಗ್ಗಲು ಕಾರ್ಯಕರ್ತರು ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಎನ್‍ಎಸ್‍ಯುಐ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಉರ್ವದಲ್ಲಿರುವ ಅಶೋಕಾ ಅಪಾರ್ಟ್ ಮೆಂಟ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈ ವೇಳೆ ಉರ್ವ ಠಾಣೆಯ ಪೊಲೀಸರು ನಳಿನ್ ಅವರ ಮನೆಗೆ ಮೊದಲೇ ಬ್ಯಾರಿಕೇಡ್ ಅಳವಡಿಸಿ ಮುತ್ತಿಗೆ ಹಾಕುವವರನ್ನು ತಡೆದಿದ್ದಾರೆ. ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಮುತ್ತಿಗೆ ಹಾಕಲು ಅವಕಾಶ ನೀಡಬೇಕೆಂದು ಉರ್ವ ಠಾಣಾಧಿಕಾರಿ ಭಾರತಿಯವರಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಅವಕಾಶ ನೀಡದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ನೂಕಿ ಮುತ್ತಿಗೆ ಹಾಕುವ ಯತ್ನ ನಡೆದಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡದೆ 20-25 ಮಂದಿ ಎನ್ಎಸ್ ಯುಐ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುತ್ತಿಗೆಯತ್ನದ ವೇಳೆ ನಳಿನ್ ಹಠಾವೋ ದೇಶ್ ಬಚಾವೋ ಘೋಷಣೆ ಕೇಳಿ ಬಂದಿದೆ.