Visitors have accessed this post 810 times.
ಮಂಗಳೂರು: ಪ್ರಕರಣವೊಂದರ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಬೆದರಿಕೆ ಹಾಗೂ ಅವಾಚ್ಯ ಸಂದೇಶದ ಕಳುಹಿಸಿ ಮಾನಸಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾವೂರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಎಂಬಾತನನ್ನು ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
ಮಹಿಳೆಯು ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಆ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಆಕೆಗೆ ಅಸಭ್ಯ ರೀತಿಯಲ್ಲಿ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಯಾರಲ್ಲಾದರೂ ದೂರು ನೀಡಿದರೆ ಜೀವನ ಪರ್ಯಂತ ಕೊರಗುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಆಘಾತಗೊಂಡ ಮಹಿಳೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ದೂರು ನೀಡಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಹೆಡ್ ಕಾನ್‌ಸ್ಟೇಬಲ್ ಸಂತೋಷ್‌ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿಗೆ ಸೂಚಿಸಿದ್ದಾರೆ.