ಬೆಂಗಳೂರು : ನಿರಂತರವಾಗಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ.! ಇನ್ನು ಮುಂದೆ ದಂಡ ವಸೂಲಿಗಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರೇ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಪೊಲೀಸ್ರು ಹಿಡಿತಿಲ್ಲ ನಮ್ಮನ್ನಯಾರು ಕೇಳಲ್ಲ ಅಂತ ಬೇಕಾಬಿಟ್ಟಿ ಸಂಚಾರಿ ನಿಯಮ ಉಲ್ಲಂಘನೆಗೆ ಮಾಡಿದ್ರೆ ಪೊಲೀಸ್ರು ಮನೆ ಬಾಗಿಲು ತಟ್ಟುತ್ತಾರೆ. ದಂಡದ ಮೊತ್ತ ಐವತ್ತು ಸಾವಿರಕ್ಕೂ ಅಧಿಕ ದಂಡ ಹೊಂದಿರುವವರ ಮನೆಗೆ ತೆರಳಿ ಹಣ ಪಾವತಿಸಿಕೊಳ್ಳುವ ಕೆಲಸಕ್ಕೆ ಸಂಚಾರಿ ಪೊಲೀಸರು ಚಾಲನೆ ನೀಡಿದ್ದಾರೆ. ಕಳೆದ ಹತ್ತು ದಿನಗಳಿಂದ ಸಂಚಾರಿ ಪೊಲೀಸರ ಕಾರ್ಯಾಚರಣೆ ಆರಂಭವಾಗಿದ್ದು, ನಗರದಲ್ಲಿ 2681 ವಾಹನಗಳ ಮೇಲೆ ಐವತ್ತು ಸಾವಿರಕ್ಕೂ ಅಧಿಕ ದಂಡ ಹೊಂದಿರುವುದು ತಿಳಿದು ಬಂದಿದೆ. ಈಗಾಗಲೇ ಅನೇಕ ವಾಹನ ಸವಾರರ ಮನೆಗೆ ಸಂಚಾರಿ ಪೊಲೀಸರು ತೆರಳಿ ದಂಡ ಪಾವತಿಸಿಕೊಳ್ಳಲಾರಂಭಿಸಿದ್ದಾರೆ. ಅನೇಕ ಸಂಧರ್ಭಗಳಲ್ಲಿ ವಾಹನಗಳ ಮಾಲೀಕರು ದಂಡ ಪಾವತಿಸದೇ ಇತರರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಅಂಥವರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ಕಾನೂನಾತ್ಮಕವಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಆರು ವರ್ಷಗಳಿಗಿಂತ ಕೆಳಮಟ್ಟದ ಮಕ್ಕಳಿಗೆ ಹಲ್ಮೆಟ್ ಧರಿಸುವ ಅಗತ್ಯವಿಲ್ಲ. ಆದರೆ, ಶಾಲಾ ಮಕ್ಕಳು ಎಂದು ಎರಡು ಮೂರು ಜನರನ್ನ ಕೊಂಡೊಯ್ಯುವುದು ಸರಿಯಲ್ಲ ಹಾಗೂ ಸುರಕ್ಷಿತವೂ ಅಲ್ಲ. ಶಾಲಾ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗಲೂ ಸಹ ಒಂದೊಂದು ವಾಹನದಲ್ಲಿ ಕ್ಷಮತೆ ಮೀರಿ ಮಕ್ಕಳನ್ನ ಕೊಂಡೊಯ್ಯುವುದು ಪತ್ತೆಯಾಗಿತ್ತು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.