
ಉಡುಪಿ: ಉಡುಪಿ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಸಲ್ಲಿಸಿರುವ ಪರೋಲ್ ಅರ್ಜಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಿರಸ್ಕರಿಸಿ ಆದೇಶ ನೀಡಿದೆ.



ಫೆಬ್ರವರಿ 1ರಂದು ನಿಧನರಾದ ತನ್ನ ಸಹೋದರ ನಿತಿನ್ ಅವರ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಮೂರು ತಾಸು ಭಾಗವಹಿಸಲು ತನ್ನ ಊರಾದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಗೆ ತೆರಳಲು ಪರೋಲ್ ಮಂಜೂರು ಮಾಡುವಂತೆ ನ್ಯಾಯಾಲಯಕ್ಕೆ ಆರೋಪಿ ಫೆಬ್ರವರಿ 8ರಂದು ಅರ್ಜಿ ಸಲ್ಲಿಸಿದ್ದನು.
ಆದರೆ ಇದಕ್ಕೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ. ನದಾಫ್ ಆಕ್ಷೇಪಣೆ ಸಲ್ಲಿಸಿದ್ದು, ಆರೋಪಿಗೆ ಪರೋಲ್ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಅಲ್ಲದೆ ಆರೋಪಿಯ ಮೇಲೆ ದಾಳಿಯಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಆರೋಪಿ ತನ್ನ ಸಹೋದರ ಮೃತಪಟ್ಟ ಬಗ್ಗೆ ಯಾವುದೇ ಮರಣ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸದೆ ಇರುವುದರಿಂದ ಆತನಿಗೆ ಪರೋಲ್ ನೀಡಬಾರದು ಎಂದು ವಾದ ಮಂಡಿಸಿದ್ದರು. ಕೋರ್ಟ್ ಈ ವಾದವನ್ನು ಪುರಸ್ಕರಿಸಿತ್ತು.