ಹಾವೇರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ, ವಿಜಯೇಂದ್ರ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಗುಡುಗಿದ್ದು, ಯಾವ ವಿಜಯೇಂದ್ರಗೂ ಹೆದರುವುದಿಲ್ಲ ಅವರ ಅಪ್ಪನಿಗೂ ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ಉದ್ದೇಶ ಏನು? ಸೋಮಣ್ಣ ಅವರನ್ನು ಎರಡು ಕಡೆ ನಿಲ್ಲಿಸಿ ಕೆಡವಿದರು. ನನ್ನನ್ನು ಬೊಮ್ಮಾಯಿಯನ್ನು ಸೋಲಿಸೋಕೆ ಎಷ್ಟೆಷ್ಟು ದುಡ್ಡು ಕಳಿಸಿದ್ರ ಗೊತ್ತಿದೆ. ಎಲ್ಲ ಇತಿಹಾಸ ಇದೆ. ಲೋಕಸಭೆ ಚುನಾವಣೆ ಬಳಿಕ ಇತಿಹಾಸ ಹೇಳುತ್ತೇನೆ. ನನ್ನನ್ನು ಅಂಜಿ ಓಡಿ ಹೋಗಿ ರಾಜಿ ಆದ ಅನಬೇಡಿ. ಯಾವ ವಿಜಯೇಂದ್ರಗೂ ಅಂಜಲ್ಕ ಅವರ ಅಪ್ಪನಿಗೂ ಅಂಜಲ್ಲ ಎಂದು ಹೇಳಿದರು.
ನಾನು ರಾಜಿ ಆಗೋ ಪ್ರಶ್ನೆಯೇ ಇಲ್ಲ. ಯಾರ್ ಜೋಡಿ ರಾಜಿ ಆಗಬೇಕು? ಅಪ್ಪ-ಮಕ್ಕಳ ಜೊತೆ ರಾಜಿ ಆಗಬೇಕಾ? ನಾನೇನು ಲೋಕಸಭಾ ಚುನಾವಣೆ ಟಿಕೆಟ್ ಕೇಳಿದ್ದೀನಾ? ವಿಜಯೇಂದ್ರನಿಂದ ನನಗೇನೂ ಆಗಬೇಕಿಲ್ಲ. ಅವರ ಜೊತೆ ನನ್ನದು ಏನೂ ವ್ಯವಹಾರ ಇಲ್ಲ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ ಉತ್ತರಿಸಿದರು.
ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಹೋಗುತ್ತಿದ್ದೇವೆ. ವಿಜಯೇಂದ್ರ ಬರಲಿ, ಬಿಡಲಿ ನಾವು ಗೆಲ್ಲುತ್ತೇವೆ ಎಂದರು.