ಬೆಂಗಳೂರು: ನಿನ್ನೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕರ್ನಾಟಕ ವಿಧಾನ ಮಂಡಲ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಟರಿಂಗ್ ಸಂಸ್ಥೆ ಪೂರೈಸಿದ್ದ ಉಪಾಹಾರದಲ್ಲಿ ಹುಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಉದ್ಘಾಟನೆ ಕಾರ್ಯಕ್ರಮದ ಬಳಿಕ ಅತಿಥಿಗಳು ಹಾಗೂ ಪತ್ರಕರ್ತರಿಗೆ ಉಪಾಹಾರ ನೀಡಲಾಗಿದೆ. ಈ ವೇಳೆ ಪತ್ರಕರ್ತರಿಗೆ ಬಡಿಸಿದ್ದ ಸಾಂಬಾರಿನಲ್ಲಿ ಹುಳು ಪತ್ತೆಯಾಗಿದೆ. ಕೂಡಲೇ ಅವರು ಅಡುಗೆ ಸಿಬ್ಬಂದಿಯ ಗಮನಕ್ಕೆ ತಂದು ಪ್ರಶ್ನೆ ಮಾಡಿದ್ದಾರೆ. ಆದರೆ, ಸಮರ್ಪಕ ಉತ್ತರ ನೀಡದ ಸಿಬ್ಬಂದಿ,ಸಬೂಬು ಹೇಳಿದ್ದಾರೆ.
ಹೀಗಾಗಿ, ಸ್ಪೀಕರ್‌ಯು.ಟಿ. ಖಾದರ್ ಅವರ ಗಮನಕ್ಕೆ ತರಲಾಯಿತು.ಉಪಾಹಾರ ಪೂರೈಸಿದ್ದ ಕೇಟರಿಂಗ್ ಸಂಸ್ಥೆಯನ್ನು ಸಂಪರ್ಕಿಸಿದ ಸ್ಪೀಕರ್ ಕಚೇರಿಯ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ. ನಮ್ಮಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದ್ದು, ಬಹುಶಃ ಕಾರ್ಯಕ್ರಮ ಸ್ಥಳದಲ್ಲಿ ಮರದಿಂದ ಬಿದ್ದಿರಬಹುದು ಎಂದು ಕೇಟರಿಂಗ್‌ನವರು ಸ್ಪಷ್ಟನೆ ನೀಡಿದ್ದಾರೆ.
ಆದರೂ, ಕೂಡ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಕಳೆದ ವರ್ಷ ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಿದ ಉಪಹಾರದಲ್ಲೂ ಕೂಡ ಹುಳು ಪತ್ತೆಯಾಗಿತ್ತು.