ಮಂಗಳೂರು: ಶಿಕ್ಷಕಿಯಿಂದ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಆರೋಪಗಳ ಸುರಿಮಳೆ..!

ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂಧರ್ಮವನ್ನು ನಿಂದಿಸಿ ಪಾಠ ನಡೆದಿದೆ ಎನ್ನಲಾದ ವಿಚಾರದಲ್ಲಿ ಸೋಮವಾರ ನಡೆದ ಸಂಘರ್ಷದ ವಿಚಾರವಾಗಿ ಶಾಲೆಯ ಮುಖ್ಯಶಿಕ್ಷಕಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಶಿಕ್ಷಕಿ ಸಿಸ್ಟರ್ ಅನಿತಾ ಅವರು ಶಾಸಕ ವೇದವ್ಯಾಸ ಕಾಮತ್ ಮೇಲೆ ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ. ಶಿಕ್ಷಕಿ ಸಿಸ್ಟರ್ ಪ್ರಭಾ ಪಾಠದ ನಡುವೆ ಹಿಂದೂ ಧರ್ಮನಿಂದನೆ ಮಾಡಿಲ್ಲ. ಘಟನೆಯ ಸಂಬಂಧ ಶಿಕ್ಷಕಿ ವಿರುದ್ಧ ಪೋಷಕರೊಬ್ಬರು ದೂರು ನೀಡಿದ್ದಾರೆ. ಈ ದೂರನ್ನು ಪರಿಶೀಲನೆ ಮಾಡುವುದಾಗಿ ನಾನು ಹೇಳಿದ್ದೆ. ಆದರೆ ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿ ವಿರುದ್ಧದ ಸಂದೇಶ ಆಡಿಯೋ ವೈರಲ್ ಆಗಿದೆ. ಈ ವಿಚಾರವಾಗಿ ಶಾಸಕ ವೇದವ್ಯಾಸ ಕಾಮತ್ ರೊಂದಿಗೆ ಶಾಲೆಯ ಬಳಿ ಬಂದ ಹಿಂದೂ ಕಾರ್ಯಕರ್ತರು ಶಾಲೆಯ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಯಾರೂ ಆ ಪಾಠ ಮಾಡಿದಾಗ ಇದ್ದ ತರಗತಿಯ ವಿದ್ಯಾರ್ಥಿಗಳಲ್ಲ. ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣಾಧಿಕಾರಿಗಳ ಸೂಚನೆಯಂತೆ ಭೇಟಿ ನೀಡಿದ್ದೆವು. ಈ ವೇಳೆ ಶಾಸಕ ಕಾಮತ್ ಶಿಕ್ಷಕಿಯನ್ನು ವಜಾ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಶಾಸಕರ ಒತ್ತಡದ ಮೇರೆಗೆ ಶಿಕ್ಷಕಿ ವಜಾ ಆದೇಶವನ್ನು ನೀಡಿದ್ದೇವೆ ಎಂದಿದ್ದಾರೆ. ಶಿಕ್ಷಕಿ ಸಿಸ್ಟರ್ ಪ್ರಭಾ 16ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. ಜೆರೊಸಾ ಶಾಲೆಯಲ್ಲಿ 5 ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ.‌ ಈವರೆಗೆ ಇಂತಹ ಪಾಠಗಳನ್ನು ಅವರು ಮಾಡಿಲ್ಲ. ಆಡಿಯೋ ವೈರಲ್ ಮಾಡಿ ನಮ್ಮ ಶಾಲೆಯ ಹೆಸರನ್ನು ಹಾಳು ಮಾಡುವುದೇ ಹೆತ್ತವರ ಉದ್ದೇಶವಾಗಿದೆ. ಈ ಹೆತ್ತವರು ಯಾವುದೇ ಲಿಖಿತ ದೂರನ್ನು ನೀಡಿಲ್ಲ. ಆಡಿಯೋ ಹರಿಬಿಟ್ಟು ಶಾಲೆಯ ಹೆಸರನ್ನು ಕೆಡಿಸಲು ನೋಡಿದ್ದಾರೆ ಎಂದು ಸಿಸ್ಟರ್ ಅನಿತಾ ಆರೋಪಿಸಿದ್ದಾರೆ.

Leave a Reply