ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯದಲ್ಲಿ ನಡೆದಿದೆ.
ಚೂರಿ ಇರಿತಕ್ಕೊಳಗಾದವರನ್ನು ಕುಂಪಲ ನಿವಾಸಿ ಮಹಮ್ಮದ್ ಆರಿಫ್(29) ಎಂದು ಗುರುತಿಸಲಾಗಿದೆ.
ಮಹಮ್ಮದ್ ಆರಿಫ್ ಶುಕ್ರವಾರ ಬೆಳಿಗ್ಗೆ ಕುಂಪಲದಿಂದ ಕೊಲ್ಯ ಕಡೆಗೆ ಸಂಚರಿಸುತ್ತಿದ್ದರು. ಇದೇ ವೇಳೆ ಇನ್ನೊಂದು ಬೈಕ್‍ನಲ್ಲಿ ಬಂದಿದ್ದ ಮುಝಮ್ಮಿಲ್ ಮತ್ತು ನಿಸಾರ್ ಎಂಬವರು ಆರಿಫ್ ಅವರನ್ನು ಬೆನ್ನಟ್ಟಿಕೊಂಡು ಹೋಗಿ ಕೊಲ್ಯದ ಬಳಿ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮುಝಮ್ಮಿಲ್ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರಿಪ್‍ರವರ ಬೆನ್ನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಆರಿಪ್‍ರನ್ನು ಶ್ರವಣ್ ಮತ್ತು ಉತ್ತಮ್ ಎಂಬವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಈ ಕೃತ್ಯ ಎಸಗಿದ ಪ್ರಮುಖ ಆರೋಪಿ ಮುಝಮ್ಮಿಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನೋರ್ವ ಆರೋಪಿ ನಿಸಾರ್ ನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಆರಿಫ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.