ಬೆಂಗಳೂರು: ಅಕ್ರಮ ಹಣ ಸಂದಾಯ ಪ್ರಕರಣ ಸಂಬಂಧ ತನಿಖಾ ಸಂಸ್ಥೆ ಎಸ್ಎಫ್ಐಎ ತನಿಖೆ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ವೀಣಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಜಾಗೊಳಿಸಿದೆ. ಅದರಂತೆ ಎಸ್ಎಫ್ಐಎ ತನಿಖೆ ಮುಂದುವರಿಸಲಿದೆ.
ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್‌ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಅಂಶ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ತಿಳಿದು ಬಂದಿತ್ತು. ಅಲ್ಲದೆ, ಈ ಹಣದ ಪೈಕಿ 1.72 ಕೋಟಿ ರೂಪಾಯಿಗಳನ್ನು ಟಿ.ವೀಣಾ ನಿರ್ದೇಶಕಿಯಾಗಿರುವ ಕರ್ನಾಟಕದಲ್ಲಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ.ಗೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು. ಯಾವುದೇ ಸೇವೆ ನೀಡದಿದ್ದರೂ ಹಣ ಸಂದಾಯ ಮಾಡಿದ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಎಸ್ಎಫ್ಐಒ ಗಮನಕ್ಕೆ ತಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್ಎಫ್ಐಒ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ವೀಣಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.