
ಬೆಳಗಾವಿ: ಮಗನ ಅಂತ್ಯಕ್ರಿಯೆಗೆ ಹಣ ವಿಲ್ಲದೆ ಪರದಾಡಿದ ಮಹಿಳೆ ನೋವಿನ ಸಮಯದಲ್ಲೂ ಗೃಹಲಕ್ಷ್ಮಿ ಯೋಜನೆಯನ್ನು ನೆನೆದು ಕಣ್ಣೀರಿಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಕಣ್ಣೀರಿಡುತ್ತಾ ಸರ್ಕಾರದ ಸಹಾಯ ನೆನಪಿಸಿಕೊಂಡ ವೃದ್ಧ ಮಹಿಳೆಯ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ (34) ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ಈ ಯುವಕನ ತಾಯಿ ನೀಲವ್ವ ಮಗನ ಅಂತ್ಯ ಸಂಸ್ಕಾರಕ್ಕೆ ಹಣ ಇಲ್ಲದೆ ಗೋಳಾಡಿದ್ದಾರೆ. ಈ ವೇಳೆ ಯಂಗ್ ಬೆಳಗಾಮ್ ಫೌಂಡೇಶನ್‌ನವರು ವೃದ್ಧೆಯ ನೆರವಿಗೆ ಬಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮಗನಿಗೆ ಅಂತಿಮ ನಮನ ಸಲ್ಲಿಸುವ ವೇಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿಯನ್ನು ನೀಲವ್ವ ನೆನಪಿಸಿಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಮಗ ತಾಯಿಗೆ 2 ಸಾವಿರ ಬರುತ್ತದೆ ಅದರಲ್ಲಿ ತಾಯಿ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದ. ತಾನಿನ್ನು ಬದುಕೋದಿಲ್ಲ ಅನ್ನೋದು ಖಚಿತವಾದಗ ಮಗ ತಾಯಿಗೆ ಆಸರೆಯಾಗಿ ಸರ್ಕಾರದ 2 ಸಾವಿರ ಸಿಗುವ ನೆಮ್ಮದಿಯಲ್ಲೇ ಪ್ರಾಣ ಬಿಟ್ಟಿದ್ದ. ಇದನ್ನ ವೃದ್ಧೆ ನೀಲವ್ವ ನೆನೆಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿದ್ದು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.


