
ಕಲಬುರಗಿ: ಶಹಬಾದ್, ಚಿತ್ತಾಪುರದ ಕಾಳಗಿ ಅಂಗನವಾಡಿ ಕೇಂದ್ರ ಮತ್ತು ವಿವಿಧ ಶಾಲೆಗಳ 8ರಿಂದ 18 ವರ್ಷ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದ್ದು, ತಪಾಸಣೆಗೊಳಪಟ್ಟ 172 ಮಕ್ಕಳಲ್ಲಿ 90 ಮಕ್ಕಳಲ್ಲಿ ತೀವ್ರ ಹೃದಯ ಕಾಯಿಲೆ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.



ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಚಿತ್ತಾಪುರ ಆರೋಗ್ಯ ಕೇಂದ್ರದಲ್ಲಿ ಹೃದಯ, ನರರೋಗ ತಜ್ಞರ ವಿಶೇಷ ತಂಡ ತಪಾಸಣೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ.
ತಪಾಸಣೆಗೆ ಒಳಪಟ್ಟ 172 ಮಕ್ಕಳಲ್ಲಿ 90 ಮಕ್ಕಳು ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದು, 41 ಮಕ್ಕಳಲ್ಲಿ ಹೃದಯ ಕಾಯಿಲೆ ತೀವ್ರವಾಗಿರುವುದು ಕಂಡುಬಂದಿದೆ. ಅವರಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ವೈದೇಹಿ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು, ಹೃದಯ, ನರ ಸಂಬಂಧಿತ ರೋಗಗಳು ಇರುವ ಮಕ್ಕಳಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.