
ನವದೆಹಲಿ: ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ಮಂಗಳೂರಿಗೆ ವಿಮಾನ ಸಂಚಾರ ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಖಾತೆಯೊಂದಿಗೆ ಚರ್ಚೆ ನಡೆಯುತ್ತಿದ್ದು ಶೀಘ್ರದಲ್ಲಿ ವಿಮಾನ ಸೇವೆ ಪ್ರಾರಂಭಗೊಳ್ಳುವುದಾಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದರು.



ನವದೆಹಲಿಯಲ್ಲಿ ಫೆಬ್ರವರಿ 20ರಂದು (ಮಂಗಳವಾರ) ಲೋಕಸಭಾ ಸದಸ್ಯರ ಕಚೇರಿಯಲ್ಲಿ ಕಲಬುರ್ಗಿ ಜಿಲ್ಲಾ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಸದಾನಂದ ಪೆರ್ಲ ಅವರು ಸಲ್ಲಿಸಿದ ಮನವಿ ಪತ್ರಕ್ಕೆ ಸ್ಪಂದನೆ ನೀಡಿ ಈ ವಿಷಯ ತಿಳಿಸಿದರು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸೌಲಭ್ಯ ಪ್ರಾರಂಭವಾಗಿರುವುದರಿಂದ ಮಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಸೌಲಭ್ಯವನ್ನು ಪ್ರಾರಂಭಿಸಲು ತೀವ್ರ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಇಂಡಿಗೋ ಸೇರಿದಂತೆ ಖಾಸಗಿ ವಿಮಾನ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ನಾಗರಿಕ ವಿಮಾನಯಾನ ಖಾತೆಯ ಅಧಿಕಾರಿಗಳೊಂದಿಗೆ ಚರ್ಚೆ ಪ್ರಗತಿಯಲ್ಲಿದೆ. ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆ ಅಡಿಯಲ್ಲಿ ಪ್ರಾರಂಭಿಸಿದ ವಿಮಾನ ನಿಲ್ದಾಣಗಳಿಗೆ ಹೆಚ್ಚು ಹೆಚ್ಚು ವಿಮಾನಗಳ ಸಂಪರ್ಕ ಸೇವೆ ಹೊಂದಿ ಆ ಭಾಗದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ನಾಗರಿಕ ವಿಮಾನ ಯಾನ ಖಾತೆಯ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಕೂಡ ಆಸಕ್ತರಾಗಿರುವುದು ಉತ್ತಮ ಬೆಳವಣಿಗೆ ಎಂದು ಡಾ. ಜಾಧವ್ ತಿಳಿಸಿದರು. ತಮ್ಮ 5 ವರ್ಷಗಳ ಅವಧಿಯಲ್ಲಿ ವಿಮಾನ ನಿಲ್ದಾಣದ ಪ್ರಗತಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು ರಾತ್ರಿ ವಿಮಾನಗಳು ಇಳಿಯುವ ಸೌಲಭ್ಯ ಉತ್ತಮ ಹೆಜ್ಜೆ, ಬೆಂಗಳೂರು – ಕಲಬುರ್ಗಿ ಮಧ್ಯೆ ವಿಮಾನ ಸೇವೆ ಈಗಾಗಲೇ ಆಗಿದ್ದು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ಸಂಪರ್ಕ ಕಲ್ಪಿಸುವ ಇಚ್ಛೆ ಹೊಂದಲಾಗಿದೆ ಎಂದು ಹೇಳಿದರು. ಉಡಾನ್ ಯೋಜನೆಯಡಿ ಪ್ರಧಾನಮಂತ್ರಿಯವರು ಸಣ್ಣ ಸಣ್ಣ ನಗರಗಳಿಗೂ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯಿಂದ ಸಾಮಾನ್ಯ ಜನರು ಕೂಡ ವಿಮಾನ ಸಂಚಾರದ ಲಾಭವನ್ನು ಪಡೆಯುತ್ತಿರುವುದು ಸಂತಸದ ಸಂಗತಿ. ದೇಶದ ಸಾಮಾನ್ಯ ಜನರು ಕೂಡ ವಿಮಾನದಲ್ಲಿ ಸಂಚರಿಸುವ ಕನಸು ಸಾಕಾರಗೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದರು.
ಫೆಬ್ರವರಿ 22ರಂದು ರಾತ್ರಿ 8 ಗಂಟೆಗೆ ಮೊದಲ ವಿಮಾನ ಬೆಂಗಳೂರಿನಿಂದ ಕಲ್ಬುರ್ಗಿಯಲ್ಲಿ ಬಂದು ಇಳಿಯುವ ಸಂದರ್ಭದಲ್ಲಿ ತಾನು ಖುದ್ದಾಗಿ ಹಾಜರಿದ್ದು ಶುಭಕೋರುವವನಿದ್ದೇನೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.