ಕಲಬುರಗಿ : ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪ್ರಾಪ್ತ ಬಾಲಕನೊಬ್ಬ ಕೆಳಗಿಳಿಸಿ ಕತ್ತು ಕೊಯ್ದ ಸಿನಿಮೀಯ ಘಟನೆ ಬಸವಕಲ್ಯಾಣ ತಾಲೂಕಿನ ಅಟ್ಟೂರ್ ಕ್ರಾಸ್ ಬಳಿ ನಡೆದಿದೆ.ಬಾಲಕಿಯ ಕತ್ತು ಕೊಯ್ದು ಏನು ಆಗೇ ಇಲ್ಲ ಎನ್ನುವಂತೆ ಆ ಬಾಲಕ ಶಾಲೆಗೆ ಹೋಗಿ ಕ್ಲಾಸ್ ರೂಮ್‌ಗೆ ಹೋಗಿ ಕುಳಿತಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದೊಂದು ಅಪ್ರಾಪ್ತ ಬಾಲಕನ ಚೆಲುವಿನ ಚಿತ್ತಾರದ ಲವ್ ಸ್ಟೋರಿ. ಈ ಕತೆಯಲ್ಲಿ 17 ವರ್ಷದ ಬಾಲಕ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ತನಗಿಂತ ಒಂದು ಕ್ಲಾಸ್ ಮುಂದಿರುವ ಹುಡುಗಿಯ ಜೊತೆ ಬಾಲಕನಿಗೆ ಪ್ರೀತಿ ಹುಟ್ಟಿದೆ. 10ನೇ ತರಗತಿಯಲ್ಲಿ ಓದುವ ಬಾಲಕಿಯನ್ನ ಪ್ರೀತಿಸು ಎಂದು ಪೀಡಿಸಿ ಹಿಂದೆ ಬಿದ್ದಿದ್ದಾನೆ.ಇಂದು ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಹುಡುಗ ಬೈಕ್ ಮೇಲೆ ಹೋಗಿ ಹಿಂಬಾಲಿಸಿದ್ದಾನೆ. ಬೆಳಮಗಿ ಗ್ರಾಮದಿಂದ ವಿ.ಕೆ ಸಲಗರ್ ಗ್ರಾಮಗಳ ಮಧ್ಯೆ ಸಂಚರಿಸುತ್ತಿದ್ದ ಬಸ್ ಇದಾಗಿತ್ತು. ಬೈಕ್‌ನಲ್ಲಿ ಬಸ್ ಹಿಂಬಾಲಿಸಿ ಹೋದವನು ಲವ್ ಗಿವ್ ಬೇಡ ಎಂದು ಬಾಲಕಿಯನ್ನ ಕೆಳಗಿಳಿಸಿದ್ದಾನೆ. ನಂತರ ಬಾಲಕಿಯನ್ನ ಕರೆದೊಯ್ದು ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಕೂಡಲೇ ಬಾಲಕಿಯನ್ನ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಾಲೆಗೆ ಹೋಗುತ್ತಿದ್ದ 10ನೇ ತರಗತಿ ಬಾಲಕಿಯ ಕತ್ತು ಕೊಯ್ದ ಬಾಲಕ ಏನು ಆಗೇ ಇಲ್ಲ ಎನ್ನುವಂತೆ ಶಾಲೆಗೆ ಹೋಗಿ ಕ್ಲಾಸ್ ರೂಮ್‌ನಲ್ಲಿ ಕುಳಿತಿದ್ದಾನೆ. ಪೊಲೀಸರು ಕ್ಲಾಸ್ ರೂಮ್‌ಗೆ ತೆರಳಿ ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ನರೋಣಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.