
ವೈಯಕ್ತಿಕ ಅವಶ್ಯಕತೆಗಳಿಗಾಗಿ ಮಹಿಳೆಯೋಬ್ಬರು ಧರ್ಮಸ್ಥಳ ಸಂಘದಲ್ಲಿ ಸಾಲವನ್ನು ಪಡೆದಿದ್ದರು, ಆದರೆ ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಂಘದವರು ಮನೆ ಬಳಿ ಬಂದು ಗಲಾಟೆ ಮಾಡಿ ನಿಂದಿಸಿದ ಕಾರಣಕ್ಕೆ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ.



ಶೃಂಗೇರಿ ಪಟ್ಟಣದ ಹನುಮಂತ ನಗರದ ನಿವಾಸಿ ಅರ್ಪಿತಾ(29) ಮೃತ ಮಹಿಳೆ ಎನ್ನಲಾಗಿದೆ. ಅರ್ಪಿತಾ ಕಳೆದ 6 ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದ ಕಾರಣದಿಂದ ಸಂಘದ ಸದಸ್ಯರು ಶುಕ್ರವಾರ ಬೆಳಗ್ಗೆ ಅರ್ಪಿತಾ ಮನೆಗೆ ತೆರಳಿ ಸಾಲದ ವಿಚಾರವಾಗಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಎರಡೂ ಕಡೆಯವರಿಂದ ವಾಗ್ವಾದ ನಡೆದಿದ್ದು, ಈ ವೇಳೆ ಸಂಘದವರು, ಸಾಲ ಕಟ್ಟಲಾಗದಿದ್ದರೆ, ಎಲ್ಲಾದರು ಹೋಗಿ ಸಾಯಿ ಎಂದು ನಿಂದಿಸಿದ್ದಾರೆ ಎನ್ನಲಾಗಿದ್ದು, ಅರ್ಪಿತಾ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಹಲ್ಲೆ ನಿಂದನೆಯಿಂದ ಮನನೊಂದ ಅರ್ಪಿತಾ ಮನೆಯಲ್ಲಿ ತನ್ನ ಮಗುವಿನೊಂದಿಗೆ ಒಬ್ಬರೇ ಇದ್ದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.