January 16, 2026
WhatsApp Image 2024-02-28 at 9.15.43 AM

ಮಂಗಳೂರು: ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆ ಬರೆದ ನಂತರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಸುರತ್ಕಲ್‌ನಲ್ಲಿ ಸಂಭವಿಸಿದೆ.

ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಕೊಪ್ಪಳ ಆಣೆಕಟ್ಟಿನ ರೈಲ್ವೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿವೆ. ಪರೀಕ್ಷೆ ಬರೆದು ಈಜಲು ತೆರಳಿದ್ದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಮಗ ಯಶ್ಚಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬವರ ಮಗ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಪ ನಿವಾಸಿ ವಿಶ್ವನಾಥ ಎಂಬವರ ಮಗ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್‌ (15) ಎಂದು ಗುರುತಿಸಲಾಗಿದೆ.ಸುರತ್ಕಲ್​ ಪಟ್ಟಣದ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಗಳು ಮಂಗಳವಾರ SSLC ಇಂಗ್ಲಿಷ್ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆದು ಶಾಲೆಯಿಂದ ಹೊರಬಂದ 4 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಎಷ್ಟು ಸಮಯವಾದರೂ ಮಕ್ಕಳು ಮನೆಗೆ ಬರದ ಹಿನ್ನೆಲೆ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸುರತ್ಕಲ್ ಪೊಲೀಸರು, ಶಾಲೆ ಮತ್ತು ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಪತ್ತೆಹಚ್ಚಿತ್ತಾರೆ. ಜೊತೆಗೆ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ ಶಾಲೆಯ ಚೀಲಗಳು, ಚಪ್ಪಲಿ ಶಾಲೆಯ ಸಮವಸ್ತ್ರಗಳು ಪತ್ತೆಯಾಗಿವೆ.ನಣತರ ಹುಡುಕಾಡಿದಾಗ ಶವಗಳು ಸಿಕ್ಕಿವೆ. ಎಲ್ಲ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪರೀಕ್ಷೆ ನಂತರ ನದಿಗೆ ಈಜಲು ಹೋಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply