ಉಡುಪಿ ಜಿಲ್ಲೆಯ ಕಾಪು ಸಮೀಪ ರಾತ್ರಿ ಮನೆಯಲ್ಲಿ ಮಲಗಿದ್ದ ಕಾಲೇಜು ವಿದ್ಯಾರ್ಥಿನಿ, ಕಟಪಾಡಿ ಏಣಗುಡ್ಡೆ ಗ್ರಾಮದ ಜೆ. ಎನ್. ನಗರ ನಿವಾಸಿ ಶೈನಾಜ್ (20) ಫೆ. 26 ರಿಂದ ನಾಪತ್ತೆಯಾಗಿದ್ದಾರೆ.
ಉಡುಪಿ ಅಜ್ಜರಕಾಡು ಸರಕಾರಿ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಶೈನಾಜ್ ಫೆ. 25 ರಂದು ರಾತ್ರಿ ತನ್ನ ಅಜ್ಜಿಯೊಂದಿಗೆ ಮಲಗಿದ್ದು ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿ, ಉಡುಪಿ ಬಸ್ ನಿಲ್ದಾಣ, ಅಜ್ಜರಕಾಡು ಮಹಿಳಾ ಕಾಲೇಜು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಆಕೆಯ ತಾಯಿ ನೂರ್ ಜಹಾನ್ ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಶೈನಾಜ್ 20 ವರ್ಷ ಪ್ರಾಯದವರಾಗಿದ್ದು 5 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು ಮನೆಯಿಂದ ತೆರಳುವಾಗ ನೇವಿ ಬ್ಲೂ ಬಣ್ಣದ ಬುರ್ಕಾ ಧರಿಸಿದ್ದಳು. ಕನ್ನಡ, ತುಳು, ಹಿಂದಿ, ಉರ್ದು ಭಾಷೆ ಬಲ್ಲವಳಾಗಿದ್ದು ಈಕೆಯನ್ನು ಗುರುತಿಸಿದವರು ಕಾಪು ಪೊಲೀಸ್ ಠಾಣೆ 0820-2551033 ಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.