Visitors have accessed this post 948 times.
ಮಂಡ್ಯ: ಐಸ್ ಕ್ರೀಮ್ ತಿಂದು ಅವಳಿ ಮಕ್ಕಳು ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಟ್ಟಹಳ್ಳಿ ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳೇ ಸಾವನ್ನಪ್ಪಿದ ದುರ್ದೈವಿಗಳು. ನಿನ್ನೆ ಸಂಜೆ ಗ್ರಾಮಕ್ಕೆ ಐಸ್ ಕ್ರೀಮ್ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್ ಕ್ರೀಮ್ ಖರೀದಿಸಿ ತಿಂದಿದ್ದ ತಾಯಿ ಮಕ್ಕಳಿಗೂ ಕೊಟ್ಟು ತಿಂದಿದ್ದಾಳೆ.
ಆ ಬಳಿಕ ಅಸ್ವಸ್ಥಗೊಂಡ ಮಕ್ಕಳು ಮನೆಯಲ್ಲಿ ಸಾವನ್ನಪ್ಪಿದ್ದು, ತಾಯಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳ ಮೃತ ದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐಸ್ ಕ್ರೀಮ್ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.