Visitors have accessed this post 456 times.
ಮಂಗಳೂರು : ಮಾದಕ ವಸ್ತು ‘ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 95 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಯಿನೂರು ರಸ್ತೆಯ ಪ್ರಮೋದ್ ಎಂ.ಜಿ. ಡಿಸ್ಕ್ (30), ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‌ನ ರಾಶೀದ್ ಎಂ.ಝಡ್ ಯಾನೆ ರಾಶಿ (41), ಮಡಿಕೇರಿಯ ಕಡಗದಾಳು ಗ್ರಾಮದ ದರ್ಶನ್ ಎಸ್.(24) ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ನೀರು ಎಂಬಲ್ಲಿ ಬ್ಲೂ ಸ್ಟಾರ್ ಲಾಡ್ಜ್‌ವೊಂದರಲ್ಲಿ ಮೂವರು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿ ಬಂಧಿಸಿದರು. ಆರೋಪಿಗಳಿಂದ 75 ಸಾವಿರ ರೂ. ಮೌಲ್ಯದ 15 ಗ್ರಾಂ ನಿಷೇಧಿತ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್‌ಗಳನ್ನು ವಶಪಡಿಸಿದ್ದಾರೆ.