
ಬೆಳಗಾವಿ: 25 ರಿಂದ 30 ವರ್ಷದ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಮಮದಾಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಕೊಲೆ ಮಾಡಿದವರಾರು? ಹತ್ಯೆ ಆದವಳು ಯಾರು? ಎಂಬುದಾಗಲಿ ಗೊತ್ತಾಗಿಲ್ಲ. ನಿನ್ನೆ(ಎ.18) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುವೆ ಪಕ್ಕದಲ್ಲಿ ಹೊಗೆಯಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಬಿಸಿಲಿನ ತಾಪಕ್ಕೆ ಹುಲ್ಲು ಇರುವ ಜಾಗಕ್ಕೆ ಬೆಂಕಿ ಬಿದ್ದಿರಬಹುದು ಎಂದು ಕೆಲವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಯುವತಿಯ ಮೃತದೇಹ ಕಂಡು ಬಂದಿದೆ.



ಯುವತಿಯ ಕತ್ತು ಕೊಯ್ದು ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರಬೇಕು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಯುವತಿಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕುವ ಪ್ರಯತ್ನ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಈ ಯುವತಿ ಯಾರು ಹಾಗೂ ಯಾರು ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ.