ಪುತ್ತೂರು: ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚುನಾವಣೆಯಲ್ಲಿ ಎಸ್‌ಡಿಪಿಐಯ ನಿಲುವಿನ ಬಗ್ಗೆ ಕೇವಲವಾಗಿ ಮಾತನಾಡಿ ಮುಸ್ಲಿಂ ಮತವನ್ನು ವಿಭಜಿಸಲು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಎಸ್‌ಡಿಪಿಐ ಪುತ್ತೂರು ನಗರ ಅಧ್ಯಕ್ಷ ಶಮೀರ್ ನಾಜೂಕು ಕೂರ್ನಡ್ಕ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಎಲ್ಲಿಯೂ ಅಧಿಕಾರಕ್ಕೆ ಬರಬಾರದು ಹಾಗೂ ಒಂದೇ ಒಂದು ಮತವು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಾರದು ಎಂಬ ಉದ್ದೇಶದಿಂದ ಎಸ್‌ಡಿಪಿಐ ಪಕ್ಷ ಎಲ್ಲಿಯೂ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ ಮಾತ್ರವಲ್ಲ ಬಿಜೆಪಿಯ ವಿರುದ್ಧ ಮತ ಚಲಾಯಿಸಿ ಕೋಮುವಾದಿ ಪಕ್ಷವನ್ನು ಸೋಲಿಸಲು ಎಸ್‌ಡಿಪಿಐ ಪಕ್ಷ ಮತದಾರರಲ್ಲಿ ಜನ ಜಾಗೃತಿಯನ್ನು ಮೂಡಿಸುತ್ತಿರುವ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಂದೇಳಿಕೊಂಡು ಚಲಾವಣೆಯಲ್ಲಿಲ್ಲದ ಸವಕಲು ನಾಣ್ಯವಾಗಿರುವ ಮಹಮ್ಮದಾಲಿ ಎಂಬವರು ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐಯ ಬಗ್ಗೆ ಕೇವಲವಾಗಿ ಮಾತನಾಡುತ್ತಾ ಪಕ್ಷದ ಕಾರ್ಯಕರ್ತರನ್ನು ಹಿತೈಷಿಗಳನ್ನು ಹಾಗೂ ಬೆಂಬಲಿಗರನ್ನು ಪ್ರಚೋದಿಸುತ್ತಾ ಜಾತ್ಯಾತೀತ ಮತವನ್ನು ವಿಭಜಿಸಿ ಬಿಜೆಪಿಯನ್ನು ಗೆಲ್ಲಿಸಲು ಹಾಗೂ ಆ ಮೂಲಕ ತಮ್ಮದೆ ಪಕ್ಷವನ್ನು ಸೋಲಿಸಲು ಬಿಜೆಪಿಯೊಂದಿಗೆ ಕೈಜೋಡಿಸಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪಕ್ಷದ ಮೇಲುಸ್ತರದ ನಾಯಕರು ಚುನಾವಣಾ ಹೊಸ್ತಲಲ್ಲಿರುವ ಈ ನಿರ್ಣಾಯಕ ಘಟ್ಟದಲ್ಲಿ ಇಂತಹ ಲೋಕಲ್ ನಾಯಕರ ನಾಲಗೆಯನ್ನು ಹದ್ದು ಬಸ್ತಿನಲ್ಲಿಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ.