Visitors have accessed this post 545 times.
ಉಪ್ಪಿನಂಗಡಿ: ಮನೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಮನೆ ಸಾಮಗ್ರಿ ಬೆಂಕಿಗೆ ಆಹುತಿಯಾದ ಘಟನೆ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ನಡೆದಿದೆ.
ಅಸ್ಲಂ ಎಂಬವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದ್ದು ಮನೆಯ ಮಾಲಕ ವಿದೇಶದಲ್ಲಿ ಕೆಲಸದಲ್ಲಿದ್ದು, ಮನೆ ಬೆಂಕಿ ಕಾಣಿಸಿಕೊಳ್ಳುವ ಸಂದರ್ಭ ಅವರ ಪತ್ನಿ ಖೌಸರ್ ಮನೆಗೆ ಬೀಗ ಹಾಕಿ ತನ್ನ ಮಕ್ಕಳೊಂದಿಗೆ ಪೇಟೆಗೆ ಹೋಗಿದ್ದರು. ಮನೆಯೊಳಗಿನಿಂದ ಹೊಗೆ ಹೊರಬರುತ್ತಿರುವುದನ್ನು ಕಂಡ ಸ್ಥಳೀಯರು ಹತ್ತಿರ ಬಂದು ಪರಿಶೀಲಿಸಿದಾಗ ಮನೆಯೊಳಗೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭ ಸ್ಥಳೀಯರಾದ ಸಿದ್ಧೀಕ್, ಅನಿಫ್, ಯು.ಟಿ. ಪಯಾಝ್, ಗ್ರಾ.ಪಂ.ಸದಸ್ಯ ಅಬ್ದುಲ್ ರಶೀದ್ ಮತ್ತಿತರರು ಬೆಂಕಿ ನಂದಿಸಲು ಯತ್ನಿಸಿದರೂ, ಅದು ಸಾಧ್ಯವಾಗದಿದ್ದಾಗ ಪುತ್ತೂರು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು. ಸುಮಾರು ಒಂದು ಗಂಟೆಯ ಕಾಲ ಸತತ ಪರಿಶ್ರಮದಿಂದ ಬೆಂಕಿಯನ್ನು ನಂದಿಸಲಾಯಿತು. ಆಕಸ್ಮಿಕ ಬೆಂಕಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣವೆನ್ನಲಾಗಿದೆ. ಅಷ್ಟರಲ್ಲಾಗಲೇ ಮನೆಯೊಳಗಿದ್ದ ಫ್ರಿಡ್ಜ್, ವಾಷಿಂಗ್ ಮೆಷಿನ್, ಪೀಠೋಪಕರಣಗಳ, ಬಟ್ಟೆಬರೆ, ಹಾಸಿಗೆ ಸಹಿತ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ ಎಂದು ಅಗ್ನಿಶಾಮಕದಳದ ಠಾಣಾಧಿಕಾರಿ ಶಂಕರ ತಿಳಿಸಿದ್ದಾರೆ.