
ಮಂಗಳೂರು : ಇತ್ತೀಚೆಗೆ ಅಡ್ಯಾರ್ ನಲ್ಲಿರುವ ಬೊಂಡಾ ಪ್ಯಾಕ್ಟರಿಯಲ್ಲಿ ಎಳ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಸಹಜವಾಗಿತ್ತು ಎಳನೀರು ಎಂದು ವರದಿಯಲ್ಲಿ ತಿಳಿಸಲಾಗಿದೆ.



ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಎಪ್ರಿಲ್ 9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಎಪ್ರಿಲ್ 22ರಂದು ಆರೋಗ್ಯ ಇಲಾಖೆಯ ಕೈ ಸೇರಿದೆ.
ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕೆಲವರ ದೇಹದಲ್ಲಿ ಇಕೊಲೈ ಬ್ಯಾಕ್ಟಿರಿಯಾ ಇರುವುದು ಪತ್ತೆಯಾಗಿದೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಅವುಗಳ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.ಅಡ್ಯಾರಿನಲ್ಲಿರುವ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ, ಕಾರ್‌ಸ್ಪೀಟ್ ಮತ್ತು ಕದ್ರಿಯಲ್ಲಿರುವ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಈಗಲೂ ಅವು ಬಂದ್ ಆಗಿಯೇ ಇವೆ. ಫ್ಯಾಕ್ಟರಿಯವರು ಸ್ವಯಂ ಪ್ರೇರಿತರಾಗಿ ಎಳನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಅಡ್ಯಾರ್‌ನಲ್ಲಿ ಪಲ್ಟಿಂಗ್ ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಗ್ರಾಹಕರಿಗೆ ಆಹಾರ ನೀಡುವಾಗ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಕಟ್ಟುನಿಟ್ಟು ಪಾಲನೆಗೆ ಆಹಾರ ಸುರಕ್ಷಾ ಅಫಿದಾವಿತನ್ನು ಫ್ಯಾಕ್ಟರಿಯಿಂದ ಪಡೆಯಲು ಆಹಾರಸುರಕ್ಷಾ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.