November 29, 2025
WhatsApp Image 2024-05-02 at 5.13.01 PM

ಪುತ್ತೂರು: ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೂತನವಾಗಿ ನೇಮಕವಾಗಿರುವ ಎಸ್.ಜೆ. ಯೇಸುರಾಜ್ ಅವರ ಧರ್ಮದ ಕುರಿತಂತೆ ಇದ್ದ ವಿವಾದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತೆರೆ ಎಳೆದಿದ್ದು, ಬಿಜೆಪಿಯ ವಿರುದ್ದ ಹರಿಹಾಯ್ದಿದ್ದಾರೆ.

ರಾಜ್ಯದ ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಜೆ. ಯೇಸುರಾಜ್ ಎಂಬವರನ್ನು ನೇಮಕ ಮಾಡಲಾಗಿತ್ತು. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಓ ಆಗಿ ನೇಮಕ ಮಾಡಿರುವುದು ಚರ್ಚೆಗೂ ಕಾರಣವಾಗಿತ್ತು.

ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ. ಹಿಂದೂ ಸಂಘಟನೆಗಳು ಆಕ್ರೋಶಕ್ಕೂ ಕಾರಣವಾಗಿದ್ದು, ರಾಜ್ಯ ಸರಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು.  ಯೇಸುರಾಜ್ ಎನ್ನುವ ಹೆಸರಿನ ಕಾರಣಕ್ಕೆ ಅನ್ಯ ಧರ್ಮದವರನ್ನು ಹಿಂದುಗಳ ದೇವಸ್ಥಾನಕ್ಕೆ ನೇಮಕ ಮಾಡಿದ್ದಾರೆಂದು ಹಿಂದು ಸಂಘಟನೆಗಳ ನಾಯಕರು ಆಕ್ಷೇಪಿಸಿದ್ದರು. ಅವರ ಧರ್ಮದ ಹಿನ್ನೆಲೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದರು. ಈ ವಿಚಾರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಯೇಸುರಾಜ್ ಅವರ ಹಿನ್ನೆಲೆ, ಗೋತ್ರಗಳ ದಾಖಲೆಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಯೇಸುರಾಜ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಬಿಜೆಪಿಯ ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸುವ ವಾಟ್ಸಪ್ ಫೇಕ್ ಯುನಿವರ್ಸಿಟಿಯ ಆಟವಾಗಿದೆ. ಯೇಸುರಾಜ್ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ ಎಂದು ಅವುಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆ ಇರುವುದರಿಂದ ಜರನ್ನು ದಾರಿ ತಪ್ಪಿಸಿ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಇದೆಂದು ಟೀಕಿಸಿದ್ದಾರೆ.

ಮೈಸೂರು ಜಿಲ್ಲೆಯ ಸಿದ್ಧಾರ್ಥ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ನಲ್ಲಿ ಪರಿಶಿಷ್ಟ ಜಾತಿಯೆಂದು ನಮೂದಾಗಿರುವ ದಾಖಲೆ, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕು ಕೃಷ್ಣರಾಜನಗರ ವಾರ್ಡ್ ನಿವಾಸಿಯಾಗಿರುವ ಎಸ್.ಜೆ. ಯೇಸುದಾಸ್ ಅವರಿಗೆ ಕಂದಾಯ ಇಲಾಖೆ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಹಿಂದು, ಪರಿಶಿಷ್ಟ ಜಾತಿಯೆಂದು ನಮೂದಾಗಿರುವುದನ್ನು ತೋರಿಸಲಾಗಿದೆ. ಆಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ ಎಂಬುದನ್ನು ಸಚಿವರು ತೋರಿಸಿದ್ದಾರೆ.

About The Author

Leave a Reply