ಮಂಗಳೂರು: ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು – ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದೆ. ಲಕ್ಷದ್ವೀಪದಿಂದ ಗುರುವಾರ ಸಂಜೆ ಆಗಮಿಸಿದ ಪರೇಲಿ ಎಂಬ ಐಷಾರಾಮಿ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಬಂದಿಳಿದಿದ್ದಾರೆ. ಮಾಜಿ ಶಾಸಕ ಜೆ.ಆರ್.ಲೋಬೊ, ಟಿ.ಕೆ. ಸುಧೀರ್ ಮತ್ತಿತರರು ಪ್ರಯಾಣಿಕರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಬೆಳಗ್ಗೆ ಮತ್ತೆ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಲಿದೆ. ಕೋವಿಡ್ ಸಂಕಷ್ಟಕ್ಕಿಂತ ಮೊದಲು ಮಂಗಳೂರು– ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಸಂಚಾರ ನಡೆಸುತ್ತಿತ್ತು. ಆದರೆ ಕಳೆದ 4 ವರ್ಷಗಳಿಂದ ಇದು ಸ್ಥಗಿತಗಡಿದೆ. ಸದ್ಯ ಹೈಸ್ಪೀಡ್ ಹಡಗು ಲಕ್ಷದ್ವೀಪದಿಂದ ಆಗಮಿಸಿದ್ದು, ಇದರಿಂದ ಮತ್ತೆ ಮಂಗಳೂರು ಹಾಗೂ ಲಕ್ಷದ್ವೀಪ ನಡುವಿನ ಬಾಂಧವ್ಯವನ್ನು ಬೆಸೆಯುವ ಆಶಾದಾಯಕ ಬೆಳವಣಿಗೆ ಆದಂತಾಗಿದೆ. ಸಾಮಾನ್ಯ ಹಡಗು ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ತಾಸುಗಳು ಅವಧಿ ಅವಶ್ಯಕ. ಆದರೆ ಪರೆಲಿ ಎಂಬ ಈ ಹೈಸ್ಪೀಡ್ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಲಕ್ಷದ್ವೀಪದ ಕ್ಲಿಂಟನ್ ನಿಂದ ಹೊರಟ ಹಡಗು ಸಂಜೆ 5 ಗಂಟೆಯ ವೇಳೆಗೆ ಬಂದರಿಗೆ ಬಂದು ತಲುಪಿದೆ. ಪ್ರತಿ ಪ್ರಯಾಣಿಕರಿಗೆ 350 ರೂ. ಪ್ರಯಾಣ ದರ ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. 2020ರ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತಗೊಂಡಿದೆ. ಆ ಬಳಿಕ ಇಲ್ಲಿನ ಹಡಗು ಕೇರಳದ ಕೊಚ್ಚಿ, ಕಲ್ಲಿಕೋಟೆಯತ್ತ ಸಂಚರಿಸುತ್ತಿತ್ತು. ಅಲ್ಲಿಂದ ರೈಲಿನಲ್ಲಿ ಮಂಗಳೂರು ತಲುಪಬೇಕಾಗಿತ್ತು. ಲಕ್ಷದ್ವೀಪದಿಂದ ಜನತೆ ಶಿಕ್ಷಣ, ವೈದ್ಯಕೀಯ ಸೇವೆ ಉದ್ಯೋಗ, ಸಂಬಂಧಿಕರಲ್ಲಿಗೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಂಗಳೂರಿಗೆ ಪ್ರಯಾಣಿಕರು ಆಗಮಿಸಿದ್ದಾರೆ. ಕೇರಳದ ಮಾಜಿ ಸಂಸದ ಹಮದುಲ್ಲಾ ಸಯ್ಯದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಇವರೆಲ್ಲರ ಪ್ರಯತ್ನದಿಂದ ಈ ಸೇವೆ ಪುನರಾರಂಭ ಸಾಧ್ಯವಾಗಿದೆ. ಕಲ್ಕತ್ತಾಕ್ಕೆ ಹೋಗುವ ಹಡಗನ್ನು ಮಂಗಳೂರು ಮಾರ್ಗವಾಗಿ ಬರುವಂತೆ ಮಾಡಲಾಗಿದೆ. ಈ ಜಲಮಾರ್ಗ ಸೇವೆಯಿಂದ ಸ್ಥಳೀಯ ವ್ಯಾಪಾರ, ವಹಿವಾಟು ವೃದ್ಧಿಗೊಳ್ಳಲಿದೆ.