ಉಪ್ಪಿನಂಗಡಿ: ತಂದೆಯ ಮರಣದ ಚಿಂತೆಯಲ್ಲಿದ್ದ ಮಗ ಆತ್ಮಹತ್ಯೆ!

ಉಪ್ಪಿನಂಗಡಿ: ಮೂರು ವರ್ಷದ ಹಿಂದೆ ಮೃತರಾದ ತಂದೆಯ ಚಿಂತೆಯಲ್ಲಿದ್ದ ಮಗ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಳಿತ್ತೊಟ್ಟು ಗ್ರಾಮದ ಅನಾಲು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಗೋಳಿತ್ತೊಟ್ಟು ಗ್ರಾಮದ ಅನಾಲು ನಿವಾಸಿ ದಿ.ವಾಸಪ್ಪ ಗೌಡರವರ ಪುತ್ರ ಶ್ರೀಹರ್ಷ ಗೌಡ(21) ಎಂದು ಗುರುತಿಸಲಾಗಿದೆ.

ಶ್ರೀಹರ್ಷ ಮೇ 4ರಂದು ರಾತ್ರಿ ಮನೆ ಸಮೀಪ ಚಿಕ್ಕಪ್ಪ ಶೀನಪ್ಪ ಗೌಡ ಎಂಬುವರ ಮಗಳ ಮದುವೆ ಔತಣಕೂಟವಿದ್ದ ಹಿನ್ನೆಲೆಯಲ್ಲಿ ಸಂಜೆಯ ತನಕ ಅಲ್ಲಿ ಕೆಲಸ ಮಾಡಿ ವಾಪಸ್​ ಮನೆಗೆ ಬಂದಿದ್ದ. ಈತನ ಸಹೋದರ ಹರ್ಷಿತ್ ಮೇ 5ರಂದು ಬೆಳಗಿನಜಾವ 2.30 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತನ ತಂದೆ 3 ವರ್ಷ ಹಿಂದೆ ನಿಧನರಾಗಿದ್ದರು. ಅಂದಿನಿಂದಲೇ ಚಿಂತೆಯಲ್ಲಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಣ್ಣ ಹರ್ಷಿತ್ ಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply