
ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ, ಕೆ. ವಸಂತ ಬಂಗೇರ (79ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಮೇ 8 ರಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.



ಕುವೆಟ್ಟು ಗ್ರಾಮದವರು. ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಬಂಗೇರರು 15 ಜನವರಿ 1946ರಂದು ಜನಿಸಿದ್ದರು. ವಸಂತ ಬಂಗೇರ ಅವರು ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್. ಎಸ್. ಎಲ್. ಸಿ. ಯನ್ನು ಮಾಡಿದರು. ಮುಲ್ಕಿ ಮತ್ತು ಉಜಿರೆಯ ಎಸ್. ಡಿ.ಎಂ. ಕಾಲೇಜುಗಳಲ್ಲಿ ವ್ಯಾಸಂಗವನ್ನು ಮಾಡಿ 1962 ರಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿದರು. 1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1983 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿ ಪ್ರಥಮ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದರು.
1985ರಲ್ಲಿ ಮತ್ತೆ ಭಾಜಪ ಬೆಂಬಲದಿಂದ ಸ್ಪರ್ಧಿಸಿ ಶಾಸಕರಾದರು. 1989ರಲ್ಲಿ ಬಿಜೆಪಿಯನ್ನು ತೊರೆದು ಜತ್ಯಾತೀತ ಜನತಾದಳಕ್ಕೆ ಸೇರ್ಪಡೆಗೊಂಡು ಸ್ಪರ್ಧಿಸಿ, ಸೋತ್ತಿದ್ದರು.1994ರಲ್ಲಿ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿದ್ದ ಕೆ. ವಸಂತ ಬಂಗೇರ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಅವಧಿಯಲ್ಲಿ ಬಂಗೇರರು ವಿಧಾನ ಸಭೆಯ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮತ್ತು 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಂಗೇರರು ಸೋಲು ಅನುಭವಿಸಿದ್ದರು. ೨೦೦೮ರ ವಿಧಾನ ಸಭಾ ಚುನಾವಣೆಯಲ್ಲಿ ಬಂಗೇರರು ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಬೆಂಬಲದಲ್ಲಿ ಸ್ಪರ್ಧಿಸಿ ನಾಲ್ಕನೇ ಅವಧಿಗೆ ಶಾಸಕರಾಗಿ ಚುನಾಯಿತರಾಗುವಲ್ಲಿ ಯಶಸ್ವಿಯಾದರು. 2013ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಅವಧಿಯಲ್ಲಿ ಸಿದ್ಧರಾಮಯ್ಯ ಅವರ ಸರಕಾರವು ವಸಂತ ಬಂಗೇರ ಅವರನ್ನು ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನೇಮಿಸಿತ್ತು. 2018 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂದು ವರ್ಗದವರನ್ನು ಅಗಲಿದ್ದಾರೆ.
ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ