February 15, 2026
WhatsApp Image 2024-05-12 at 6.05.54 PM
ಉಪ್ಪಿನಂಗಡಿ ಸಮೀಪ ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತ ಗಂಡಸು ಮತ್ತು ಹೆಂಗಸು ಹಾಡುಹಗಲೇ ಮನೆಯೊಳಗೆ ಪ್ರವೇಶಿಸಿ ಮಗುವನ್ನು ಕೊಲ್ಲುವ ಬೆದರಿಕೆಯೊಡ್ಡಿ, ಮಹಿಳೆಯ ಮೈ ಮೇಲಿದ್ದ ಚಿನ್ನಾಭರಣವನ್ನು ದರೋಡೆಗೈದ ಘಟನೆ ಶನಿವಾರ ಸಂಭವಿಸಿದೆ.
ಝಕರಿಯಾ ಎಂಬವರ ಪತ್ನಿ ಸುಹೈಬಾ(25) ಅವರು ಇಂದು ಬೆಳಗ್ಗೆ 10.20ರ ಸುಮಾರಿಗೆ ಮನೆಯ ಎದುರು ಸಿಟೌಟ್‍ನಲ್ಲಿ ಕಸ ಗುಡಿಸುತ್ತಿರುವಾಗ ಮನೆಯ ಅಂಗಳಕ್ಕೆ ಅಪರಿಚಿತ ಗಂಡಸು ಮತ್ತು ಹೆಂಗಸು ಬಂದು ಸುಹೈಬಾರಿಗೆ ಕರಪತ್ರವೊಂದನ್ನು ತೋರಿಸಿ ಸಹಾಯ ಮಾಡಬೇಕು ಎಂದು ಹೇಳಿ, ಕುಡಿಯಲು ನೀರು ಬೇಕು ಎಂದು ಕೇಳಿದಾಗ ಸುಹೈಬಾ ಮನೆಯ ಹೊರಗಿರುವ ನಳ್ಳಿಯಿಂದ ನೀರು ತರಲೆಂದು ಬಾಟಲಿ ಹುಡುಕುತ್ತಿರುವಾಗ ಅಪರಿಚಿತರು ಮನೆಯ ಒಳಗೆ ಹೋಗುವುದನ್ನು ಕಂಡು ಬೊಬ್ಬೆ ಹಾಕಿ ನೀವು ಎಲ್ಲಿಗೆ ಹೋಗುತ್ತೀರಿ ? ಎಂದು ಕೇಳಿ ಒಳ ಹೋದಾಗ ಅವರಿಬ್ಬರು ಮನೆಯ ಒಳಗಿನ ಬೆಡ್ ರೂಮಿನಲ್ಲಿರುವ ಕಪಾಟಿನ ಬಾಗಿಲು ತೆರೆದು ಹುಡುಕುತ್ತಿರುವುದು ಕಂಡು ಬಂತು. ಕೂಡಲೇ ಸುಹೈಬಾರವರು ಇನ್ನೊಂದು ಕೋಣೆಯಲ್ಲಿರುವ ಮಗುವನ್ನು ಎತ್ತಿಕೊಂಡು ಪತಿಗೆ ಕಾಲ್ ಮಾಡುತ್ತಿರುವಾಗ ಆ ಇಬ್ಬರು ವ್ಯಕ್ತಿಗಳು ಸುಹೈಬಾರ ಬಳಿ ಬಂದು ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದರು.
ನಂತರ ಚೂರಿ ತೋರಿಸಿ ನಿನ್ನಲ್ಲಿರುವ ಚಿನ್ನ ಕೊಡು, ಇಲ್ಲದಿದ್ದರೆ ನಿನ್ನ ಮಗುವನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿದಾಗ ಮಹಿಳೆ ಹೆದರಿ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ತೆಗೆದು ಕೊಟ್ಟಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅವರು ಎಳೆದು ಪರಾರಿಯಾದರು ಎಂದು ದೂರಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply