ಹಾಸನ: ಪೆನ್‍ಡ್ರೈವ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕರ ಆಪ್ತರೊಬ್ಬರು ಸೇರಿದಂತೆ ಇಬ್ಬರನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಬಿಜೆಪಿ ಮಾಜಿ ಶಾಸಕರ ಅತ್ಯಾಪ್ತನೆನ್ನಲಾದ ಲಿಖಿತ್‍ಗೌಡ ಮತ್ತು ಯಲಗುಂದ ಚೇತನ್ ಎಂಬ ಇಬ್ಬರನ್ನು ಪೆನ್‍ಡ್ರೈವ್ ಹಂಚಿಕೆ ಸಂಬಂಧದ ಆರೋಪದಲ್ಲಿ ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೆನ್‍ಡ್ರೈವ್ ವೈರಲ್ ವಿಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪೂರ್ಣ ಚಂದ್ರ ತೇಜಸ್ವಿ ಎಂಬುವವರು ಏ.23ರಂದು ಹಾಸನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿ ಲೋಕಸಬೆ ಚುನಾವಣೆಗೆ ಸರ್ಧಿಸಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರ ಭಾವಚಿತ್ರಗಳನ್ನು ನವೀನ್‍ಗೌಡ ಎಂಬುವವರು ಮಾ-ರ್ï ಮಾಡಿ ಅಶ್ಲೀಲ ವಿಡಿಯೋ ತಯಾರಿಸಿಕೊಂಡು ಮನೆ ಮನೆಗೆ ತೆರಳಿ ಮತದಾರರಿಗೆ ಪೆನ್‍ಡ್ರೈವ್, ಸಿಡಿ, ವಾಟ್ಸಾಪ್ ಪೋಟೊಗಳನ್ನು ಮೊಬೈಲ್‍ಗಳಲ್ಲಿ ತೋರಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.
ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸರ್ಕಾರ ಎಸ್‍ಐಟಿಗೆ ವಹಿಸಿದೆ. ತನಿಖೆ ಕೈಗೊಂಡ ಎಸ್‍ಐಟಿ ಇಂದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಪೆನ್‍ಡ್ರೈವ್‍ಗಳನ್ನು ಏಕೆ ಹಂಚಲಾಯಿತು, ಎಲ್ಲೆಲ್ಲಿ ಹಂಚಿದ್ದೀರಿ, ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಅವರಿಗೆ ಕೇಳಿ ಎಸ್‍ಐಟಿ ಮಾಹಿತಿ ಕಲೆ ಹಾಕುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಎಸ್‍ಐಟಿ ಶೋಧ ನಡೆಸುತ್ತಿದೆ. ಹಾಸನದಲ್ಲಿ ಹರಿದಾಡಿದೆ ಎನ್ನಲಾದ ಪೆನ್‍ಡ್ರೈವ್ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಶಾಸಕ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಲವು ಸಂತ್ರಸ್ತ ಮಹಿಳೆಯರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ನವೀನ್‍ಗೌಡ, ಕಾರ್ತಿಕ್‍ಗೌಡ ಸೇರಿ ನಾಲ್ವರಿಗೆ ಎಸ್‍ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.
ಪೆನ್‍ಡ್ರೈವ್‍ಅನ್ನು ಮನೆ ಮನೆಗೆ ಹಂಚಿ ಮಹಿಳೆಯರ ಮಾನಾಪಹರಣ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟ ತೀವ್ರಗೊಂಡಿದೆ.