ಪುತ್ತೂರು : ರಸ್ತೆ ಬದಿ ನಿಲ್ಲಿಸಿದ್ದ ಕಾರು ಚಲಾಯಿಸಿದ ಮಾನಸಿಕ ಅಸ್ವಸ್ಥ -ಯದ್ವಾತದ್ವಾ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ

ಪುತ್ತೂರು : ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಮಾನಸಿಕ ಅಸ್ವಸ್ಥ ಯುವಕನೋರ್ವ ಯದ್ವಾತದ್ದ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಆತಂಕ ಸೃಷ್ಟಿಸಿದ ಘಟನೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ನಡೆದಿರುವುದು ವರದಿಯಾಗಿದೆ. ಮಾನಸಿಕ ಅಸ್ವಸ್ಥನನ್ನು ಕೇರಳದ ಕೊಟ್ಟಾಯಂ ನಿವಾಸಿ ‘ಅರುಣ್ ಎಂದು ಗುರುತಿಸಲಾಗಿದೆ. ಈತ ಕೊಟ್ಟಾಯಂನಿಂದ ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಕಳೆದ ಹಲವು ಸಮಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಯುವಕ ಪುತ್ತೂರು ಸಂಪ್ಯದ ರಸ್ತೆ ಬದಿ ಕೀ ಸಮೇತ ನಿಲ್ಲಿಸಲಾಗಿದ್ದ ಕಾರನ್ನು ಹತ್ತಿ ಅದನ್ನು ಚಲಾಯಿಸಿಕೊಂಡು ಕುಂಬ್ರದ ಕಡೆಗೆ ಹೋಗಿದ್ದಾನೆ. ಈ ವೇಳೆ ವಾಹನವನ್ನು ಯದ್ವಾತದ್ವಾ ಚಲಾಯಿಸಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಈತನ ಅವಾಂತರ ಗಮನಿಸಿದ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ತಡೆದಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದೂಕು ಇರುವುದು ಸಾರ್ವಜನಿಕರಿಗೆ ಕಾಣಿಸಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಸಂಪ್ಯ ಪೊಲೀಸ್ ಉಪ ನಿರೀಕ್ಷಕರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಯುವಕನನ್ನು ವಿಚಾರಿಸಿದಾಗ ಕೇರಳ ಮೂಲದ ಅರುಣ್ ಎಂದು ತಿಳಿದು ಬಂದಿದೆ. ಕೊಟ್ಟಾಯಂನಿಂದ ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದ ಆತನ ಪೋಷಕರಿಗೂ ಮಾಹಿತಿ ನೀಡುವ ಕೆಲಸವನ್ನು ಪೊಲೀಸರು ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಗೋವರ್ಧನ್ ಎಂಬವರು ಠಾಣೆಯಲ್ಲಿ ಠೇವಣಿ ಇಟ್ಟ ಬಂದೂಕು ಹಿಂಪಡೆದು ಕಾರಿನಲ್ಲಿಟ್ಟು ಮನೆಗೆ ಹೋಗಲು ಅನುವಾದ ಸಂದರ್ಭ ಮಳೆ ಸುರಿದಿದ್ದು, ಕಾರಿನಲ್ಲೇ ಕೀ ಬಿಟ್ಟು ಪಕ್ಕದ ಅಂಗಡಿಗೆ ಹಾಲು ತರಲು ಹೋಗಿ ದ್ದರು. ಈ ಸಂದರ್ಭದಲ್ಲೇ ಆಗಮಿಸಿದ ಅರುಣ್ ಕಾರನ್ನು ಏರಿ ಅದನ್ನು ಚಲಾಯಿಸಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.

Leave a Reply