ಬೆಳ್ತಂಗಡಿ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶುವೈದ್ಯನಿಂದ ಹಲ್ಲೆ; ವ್ಯಕ್ತಿ ಸ್ಥಳದಲ್ಲೇ ಸಾವು
ಬೆಳ್ತಂಗಡಿ: ಪಶುವೈದ್ಯನೋರ್ವ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಜೋಡುಮಾರ್ಗ ಸರ್ಕಲ್‌ನಲ್ಲಿ ಸೋಮವಾರ ನಡೆದಿದೆ.ಪಟ್ರಮೆ ಗ್ರಾಮದ ಕೃಷ್ಣ ಯಾನೆ ಕಿಟ್ಟ (58) ಹಲ್ಲೆಗೊಳಗಾಗಿ ಸಾವನ್ನಪ್ಪಿದವರು. ಕೃಷ್ಣ ಅವರು ವಿಪರೀತ ಜ್ವರದಿಂದ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡದ್ದರಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಂದಿದ್ದಾರೆ. ಈ ಸಂದರ್ಭ ತನ್ನ ಪರಿಚಿತರೇ ಆದ ಕೊಕ್ಕಡದ ಪಶು ವೈದ್ಯ ಡಾ| ಕುಮಾರ್ ಅವರು ಕೃಷ್ಣ ಅವರಲ್ಲಿ ಮಾತನಾಡುತ್ತ ಜ್ವರ ಇದ್ದು ಇಷ್ಟು ಬೇಗ ಆಸ್ಪತ್ರೆಯಿಂದ ಯಾಕೆ ಬಂದೆ. ಆರೋಗ್ಯ ಸುಧಾರಿಸಿ ಬರಬೇಕಿತ್ತು ಎಂದು ಬುದ್ದಿ ಮಾತು ಹೇಳಿ ಒಂದು ಏಟು ಹೊಡೆದಿದ್ದಾರೆ ಎನ್ನಲಾಗಿದೆ.
ಪಶು ವೈದ್ಯರು ಹೊಡೆದ ರಭಸಕ್ಕೆ ಕೃಷ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೆಲ ಹೊತ್ತಿನಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.