
ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ವಂಚಿತ ಅತೃಪ್ತ ನಾಯಕರೆಲ್ಲರು ಸೇಡಿಗಾಗಿ ತಹತಹಿಸುತ್ತಿದ್ದಾರೆ. ಫಲಿತಾಂಶ ಹೊರಬಿದ್ದ ಕೂಡಲೇ ಈ ಸೇಡಿನ ಜ್ವಾಲೆ ಧಗಧಗಿಸಿದರೆ ಆಶ್ಚರ್ಯ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಉಡುಪಿ ಬಿಜೆಪಿಯಲ್ಲಿ ನಡೆಯುತ್ತಿರುವ ಘಟನಾವಳಿಗಳೇ ಪ್ರತ್ಯಕ್ಷ ಉದಾಹರಣೆಯಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.



ಲೋಕಸಭಾ ಚುನಾವಣೆಯಲ್ಲಿ ಹಲವಾರು ನಾಯಕರಿಗೆ ಟಿಕೇಟ್ ಸಿಗದೆ ಅತೃಪ್ತರಾಗಿದ್ದು ಈಗ ವಿಧಾನಪರಿಷತ್ ಚುನಾವಣೆಯಲ್ಲಿ ಕೂಡ ಬಿಜೆಪಿಯ ಕೆಲವೊಂದು ನಿಷ್ಟಾವಂತ ನಾಯಕರಿಗೆ ಟಿಕೆಟ್ ನೀಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಮೂರು ಬಾರಿ ಶಾಸಕರಾದ ರಘುಪತಿ ಭಟ್ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಟಿಕೇಟ್ ನೀಡದೆ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಮಾಡಿ ಬಿಜೆಪಿ ಪಕ್ಷದ ನಾಯಕರ ನಡವಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೀತಿ ನೋಡಿದರೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಯಾರೇ ಆದರೂ ಮಾಡಿದ ಕೆಲಸವನ್ನು ಒಪ್ಪಿಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿಯಾಗಿದ್ದು ಒರ್ವ ಶಾಸಕರಾಗಿ ಉಡುಪಿಯ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡದೆ ಉತ್ತಮ ಕೆಲಸ ಮಾಡಿರುವುದರಲ್ಲಿ ರಘುಪತಿ ಭಟ್ ಎಂದರೆ ತಪ್ಪಿಲ್ಲ. ಜಿಲ್ಲೆಯ ಹಾಗೂ ಉಡುಪಿ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ನಿಜಕ್ಕೂ ಶ್ಲಾಘನಾರ್ಹವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರಿಗೆ ಟಿಕೆಟ್ ತಪ್ಪಿಸಿ ಬೆರೆಯವರಿಗೆ ನೀಡಿದ್ದಲ್ಲದೆ ಈಗ ವಿಧಾನಪರಿಷತ್ ಚುನಾವಣೆಗೆ ಸಹ ಅವಕಾಶ ನೀಡದೆ ವಂಚಿಸಿರುವುದು ಬಿಜೆಪಿಯಲ್ಲಿ ನೈಜ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಪಕ್ಷದಲ್ಲಿನ ಗುಂಪುಗಾರಿಕೆ, ಅವಕಾಶ ವಂಚಿತರ ಆಕ್ರೋಶ ಮುಂದೆ ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದರೂ ಆಶ್ಚರ್ಯವಿಲ್ಲ.
ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ಪಕ್ಷದಲ್ಲೇ ಇಟ್ಟುಕೊಂಡಿದ್ದರೂ ಕೂಡ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗರು ಮೊದಲು ತಮ್ಮ ಪಕ್ಷದ ಆಂತರಿಕ ಜಗಳದ ಕುರಿತು ಚಿಂತೆ ಮಾಡುವುದು ಒಳಿತು ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಸುಭದ್ರ ಸರಕಾರದ ಪತನದ ಬಗ್ಗೆ ಹಗಲು ಕನಸು ಕಾಣುವುದನ್ನು ಬಿಡುವುದು ಉತ್ತಮ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.