
ಮಂಗಳೂರು : ಸಿಎಂ ಸಿದ್ದರಾಮಯ್ಯ ನಾಳೆ ಮಂಗಳವಾರ ದ.ಕ.ಜಿಲ್ಲೆಗೆ ಆಗಮಿಸಲಿದ್ದು, ಮಾಜಿ ಶಾಸಕ ವಸಂತ ಬಂಗೇರ ಉತ್ತರ ಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಮಂಗಳವಾರ ಮೇ 21ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು, ಮಧ್ಯಾಹ್ನ 12ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಮಧ್ಯಾಹ್ನ 1ಗಂಟೆಗೆ ಗುರುವಾಯನಕೆರೆಯ ಕುವೆಟ್ಟು ಮಂಜಿಬೆಟ್ಟುವಿನಲ್ಲಿ ನಡೆಯಲಿರುವ ಮಾಜಿ ಶಾಸಕ ದಿ.ಕೆ. ವಸಂತ ಬಂಗೇರ ಉತ್ತರ ಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಅಲ್ಲಿಂದ ಹೊರಟು, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 3ಗಂಟೆಯ ವಿಮಾನದಲ್ಲಿ ಅವರು ಬೆಂಗಳೂರಿಗೆ ತೆರಳಲಿದ್ದಾರೆ. ವಸಂತ ಬಂಗೇರ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರು. 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ 8ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾದರು.


