ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಅವರ ಗರ್ಡಾಡಿಯ ಮನೆಗೆ ಪೊಲೀಸರು ಬಂದಿದ್ದು, ಅವರ ಬಂಧನದ ಸಾಧ್ಯತೆಯಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ಬಾಪುರಮಠ ಹಾಗೂ ಪಿಎಸ್‌ಐ ಚಂದ್ರಶೇಖರ್ ಸೇರಿದಂದೆ ಪೊಲೀಸ್ ಸಿಬ್ಬಂದಿ ಮನೆಗೆ ಬಂದಿದ್ದಾರೆ. ಇಂದು ಬೆಳಗ್ಗೆ 11ಗಂಟೆ ವೇಳೆಗೆ ಅವರ ಮನೆಗೆ ಪೊಲೀಸರು ಆಗಮಿಸಿದ್ದಾರೆ.
ಈ ವೇಳೆ ಅವರ ಮನೆಯಲ್ಲಿ ಕಾರ್ಯಕರ್ತರು ಸಾಕಷ್ಟು ಮಂದಿ ಜಮಾಯಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಮೇ 18ರಂದು ಅಕ್ರಮ ಕಲ್ಲುಕೋರೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ರಾತ್ರೋರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಎಫ್‌ಐಆರ್ ದಾಖಲಾಗಿತ್ತು. ಮೇ 21ರಂದು ಪ್ರತಿಭಟನೆ ನಡೆದ ದಿನ ಪೊಲೀಸರಿಗೆ ಬೆದರಿಕೆ ಒಡ್ಡಿರುವ ಕುರಿತು ಅವರ ಮೇಲೆ ಇನ್ನೊಂದು ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬಂಧನ ಸಾಧ್ಯತೆಯಿದೆ ಎನ್ನಲಾಗುತ್ತಿದೆ.