
ಕನ್ಯಾನ : ಸಂಶಯಾಸ್ಪದವಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಶವ ದಫನ ಮಾಡಿದ ಬಳಿಕ, ಸಾವಿನಲ್ಲಿ ಸಂಶಯವಿದೆ ಎಂದು ಮೃತ ವ್ಯಕ್ತಿಯ ಸಹೋದರ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಕನ್ಯಾನ ಬಂಡಿತ್ತಡ್ಕ ಮಸೀದಿ ಆವರಣದಲ್ಲಿ ದಫನ ಮಾಡಿದ್ದ ಶವವನ್ನು 18 ದಿನಗಳ ಬಳಿಕ ಮೇಲೆತ್ತಿ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು. ಕೇರಳದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಅವರ ದೇಹವನ್ನು ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಲಾಗಿತ್ತು. ಆ ಶವವನ್ನು ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್, ಮಂಜೇಶ್ವರ ಸಿಪಿಐ ರಾಜೀವ್ ಕುಮಾರ್ ಕೆ., ಕೇರಳ ಆರೋಗ್ಯ ಇಲಾಖೆಯ ಡಾ.ಹರಿಕೃಷ್ಣ ಕಾಸರಗೋಡು, ಯೆನೆಪೋಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಬಿ., ವಿಟ್ಲ ಪೊಲೀಸರ ಸಮ್ಮುಖದಲ್ಲಿ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದೇಹದ ಅಂಗಾಗಳ ಮಾದರಿಯನ್ನು ವಿಧಿವಿಜ್ಞಾನ ತಂಡ ಪಡೆದುಕೊಂಡಿದ್ದು, ತನಿಖೆಗಾಗಿ ಯೆನೆಪೋಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಬಂದಿದ್ದು, ವರದಿಯನ್ನು ಕೇರಳದ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.



ಮಂಜೇಶ್ವರ ಠಾಣೆ ಎ.ಎಸ್.ಐ. ಮಧುಸೂದನನ್ ಕೆ. ಅವರನ್ನೊಳಗೊಂಡ ತಂಡ, ಯೆನೆಪೋಯ ನ್ಯಾಯ ವೈದ್ಯಶಾಸ್ತ್ರ ಉಪನ್ಯಾಸಕ ಡಾ. ಶ್ಯಾಮ್ ಕಿಶೋರ್, ಡಾ.ಅಲೆನ್, ಡಾ.ನಸೀರ್ ಸೇರಿ 8 ಮಂದಿಯ ತಂಡ ಮರಣೋತ್ತರ ಪರೀಕ್ಷೆ ನಡೆಸಿದರು. ಕನ್ಯಾನ ಮೂಲದ ಅಶ್ರಪ್ ಸುಂಕದಕಟ್ಟೆ ಮಜೀರ್ಪಳ್ಳ ಎಂಬಲ್ಲಿ ಗೂಡಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೇ 5ರಂದು ಆಹಾರ ಸೇವಿಸಿ ಮಲಗಿದ್ದು, ಮೇ 6ರಂದು ಬೆಳಗ್ಗೆ 6ಗಂಟೆಗೆ ಮೃತಪಟ್ಟಿದ್ದರು. ಹೃದಯಾಘಾತದಿಂದ ಮೃತ ಪಟ್ಟಿರಬಹುದು ಎಂದು ಅವರ ಪತ್ನಿ, ಇಬ್ಬರು ಪುತ್ರರರು ದೇಹವನ್ನು ಮೇ 6ರಂದು ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಿದ್ದರು.ಪುಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೃತರ ಸಹೋದರ ಇಬ್ರಾಹಿಂ ಆ ದಿನವೇ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಮೂರನೇ ದಿನ ಮೃತ ಸಹೋದರನ ಮನೆಗೆ ಹೋದ ಸಂದರ್ಭ ಅಲ್ಲಿ ಸೇರಿದ್ದವರು ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ವ್ಯಕ್ತಿಯೊಬ್ಬನ ಮೇಲೆ ಸಂದೇಹಪಟ್ಟಿದ್ದರಿಂದ ಅಸಹಜ ಸಾವಿನ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಕಾಸರಗೋಡು ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು.