
ಉಡುಪಿ : ರಘುಪತಿ ಭಟ್ ಅವರೇ, ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ ಎಂದು ಹಿಜಾಬ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಬಿಜೆಪಿಯಿಂದ ಉಚ್ಚಾಟಿತ ಮಾಜಿ ಶಾಸಕ ರಘುಪತಿ ಭಟ್ ಕಾಲೆಳೆದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ? ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು ಎಂದು ಬರೆದುಕೊಂಡಿದ್ದಾರೆ.


