
ಮಂಗಳೂರು: ಮಂಗಳೂರಿನ ಕಂಕನಾಡಿಯ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಜ್ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮಸೀದಿಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ನಮಾಜ್ ಮುಗಿಯುವ ಸಮಯದಲ್ಲಿ ಬಂದ ಯಾರೋ ಹೊರಗಿನವರು, ರಸ್ತೆಯಲ್ಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರು ಸಮೀಪದ ಆಸ್ಪತ್ರೆಗೆ ಬಂದವರು ಅಥವಾ ಬೇರೆ ಕಡೆಯ ಕೂಲಿ ಕಾರ್ಮಿಕರು ಇರಬಹುದು. ನಾವೂ ಆಗ ನಮಾಜ್‌ನಲ್ಲಿ ತೊಡಗಿದ್ದರಿಂದ ಆಗ ಈ ವಿಚಾರ ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ.ಕಂಕನಾಡಿ ಮಸೀದಿ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಕೆಲವರು ನಮಾಜ್ ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡಿದ ಆರೋಪದ ಮೇರೆಗೆ ಪೊಲೀಸರು ಅಪರಿಚಿತರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.



ಈ ಬಗ್ಗೆ ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಇನ್ನು ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಇಂತಹ ಘಟನೆ ಮರುಕಳಿಸುವುದನ್ನು ತಡೆಯಲು ಭದ್ರತಾ ಸಿಬ್ಬಂದಿಯನ್ನೂ ನೇಮಿಸುತ್ತೇವೆ’ ಎಂದು ಇಲ್ಲಿಯ ಕಂಕನಾಡಿ ಮಸೀದಿಯ ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿ ಅಬ್ದುಲ್ ಸಮದ್ ಹೇಳಿದ್ದಾರೆ.ಶುಕ್ರವಾರ ಸಂಜೆ ಈ ವಿಚಾರ ನಮ್ಮ ಗಮನಕ್ಕೆ ಬಂತು. ಶನಿವಾರವೇ ಮಸೀದಿಯ ಆಡಳಿತ ಸಮಿತಿ ಈ ವಿಚಾರವನ್ನು ಚರ್ಚಿಸಿ ಕ್ರಮ ವಹಿಸಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಮುನ್ನವೇ ಕದ್ರಿ ಪೊಲೀಸ್ ಠಾಣೆಯಲ್ಲಿ ನಾವು ಸ್ಪಷ್ಟನೆ ನೀಡಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ನೊಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂಬ ಭರವಸೆಯನ್ನೂ ನೀಡಿದ್ದೇವೆ’ ಎಂದು ತಿಳಿಸಿದ್ದಾರೆ.
‘ಇದರಲ್ಲಿ ವಿವಾದ ಏನೂ ಇಲ್ಲ. ನಮಾಜ್ ವಿಚಾರದಲ್ಲಿ ವಿವಾದ ಮಾಡುವ ಅಗತ್ಯವೂ ನಮಗಿಲ್ಲ. ನಮಾಜ್‌ನಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಅವರು ಹೇಳಿದ್ದಾರೆ.