ಮಂಗಳೂರು: ನಗರದ ಬಲ್ಮಠದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಫಿಶ್ ಫಾರ್ಮರ್ಸ್ ವೆಲ್ ಫೇರ್ ಪ್ರೊಡ್ಯೂಸರ್ ಕಂಪನಿಯಿಂದ ವಂಚನೆಗೊಳಗಾದ ನೂರಕ್ಕೂ ಹೆಚ್ಚು ಮಂದಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮೂಲಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ನೀಡಿದ ಬೆನ್ನಲ್ಲೇ ಮಂಗಳೂರು ಪೂರ್ವ ಠಾಣೆಯಲ್ಲಿ ಸಂಸ್ಥೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
62 ವರ್ಷದ ಆರ್. ಬಾಲಚಂದ್ರರವರು ನೀಡಿದ ದೂರಿನನ್ವಯ ಎಫ್ ಐಆರ್ ದಾಖಲಾಗಿದೆ. ಕೆಲವು ತಿಂಗಳುಗಳ ಹಿಂದೆ ಹೆಚ್ಚಿನ ಲಾಭ ಕೊಡಿಸುವುದಾಗಿ ಹೇಳಿ ಹಣ ಠೇವಣಿಯಿರಿಸಿ ಕೆನರಾ ಫಿಶ್ ಆಂಡ್ ಫಾರ್ಮರ್ಸ್ ಸಂಸ್ಥೆಯು ವಂಚಿಸಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ, ಆಡಳಿತ ನಿರ್ದೇಶಕರುಗಳಾದ ಸಿಂಧು ಚಕ್ರಪಾಣಿ, ಸಿಮಿ ಪಾರುತಿವಲಪ್ಪಿಲ್ ಶಾಜಿ ಅಲ್ ಡೂಸ್, ಸಂಗೀತ ಗೋಪಿ, ಅನಿಲ್ ಚಕ್ರಪಾಣಿ, ಮನೋಜ್ ಪಿ., ಹೇಮಂತ್ ಪ್ರದೀಪ್, ಪುತಿಯ ವಲಪ್ಪಿಲ್ ಶಾಜಿ, ವಲಿಯಾರ್ ಚೆರಿಯನ್ ನಿಕಿಲ್, ಅನಿಲ್ ಮಹನ್ ಎಂಬವರು ಹಾಗೂ ರೀಜನಲ್ ಮ್ಯಾನೇಜರ್ ಸಂತೋಷ್ ಕುಮಾರ್ ಮತ್ತು ಬ್ರಾಂಚ್ ಮ್ಯಾನೇಜರ್ ರವಿಚಂದ್ರ ಬಾಳೆಹೊಳೆ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.
ಇವರೊಂದಿಗೆ ಇನ್ನೂ 120 ಮಂದಿಗೆ ವಂಚಿಸಲಾಗಿದೆ. ಅಂದಾಜು 55,81,582 ರೂ. ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರಿನ ಬಲ್ಮಠದ ಲಕ್ಷ್ಮಿ ಕೃಷ್ಣ ಟವರ್ ಮೊದಲನೇ ಮಹಡಿಯಲ್ಲಿರುವ ಕೆನರಾ ಫಿಶ್ ಫಾರ್ಮರ್ಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ್ ಕುಮಾರ್ ಮತ್ತು ಬ್ರಾಂಚ್ ಮ್ಯಾನೇಜರ್ ರವಿಚಂದ್ರ ಬಾಳೆಮೂಲೆ ಹಾಗೂ ಅವರ ತಂಡ ಹಂತ ಹಂತವಾಗಿ ತಮ್ಮಿಂದ ಹಣ ಹೂಡಿಕೆ ಮಾಡಿಸಿಕೊಂಡು ಹಿಂಪಡೆಯಲು ಹೋದಾಗ ಸಂಸ್ಥೆಯ ಬಾಗಿಲು ಮುಚ್ಚಿದ್ದು, ಇದರಿಂದ ವಂಚನೆಗೊಳಗಾಗಿರುವ ತಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
ತಮ್ಮ ಬಣ್ಣದ ಮಾತುಗಳಿಂದ, ತಮ್ಮ ಸಂಸ್ಥೆಯಲ್ಲಿ ಬೇರೆ ಸಂಸ್ಥೆಗಳಿಗಿಂತ ಹೆಚ್ಚು ಬಡ್ಡಿ ಮತ್ತು ವಿವಿಧ ರೀತಿಯ ಲಾಭಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ನಮ್ಮಿಂದ ಹಣ ಪಡೆದಿರುತ್ತಾರೆ. ಇದೀಗ ನಾವುಗಳು ಹೂಡಿದ ಹಣ ಹಿಂಪಡೆಯಲು ಬಲ್ಮಠದ ಕಚೇರಿಗೆ ಹೋದಾಗ ಸಂಸ್ಥೆಯು ಬಾಗಿಲು ಮುಚ್ಚಿದೆ. ಇದರಿಂದ ಆಘಾತಗೊಂಡು ನಾವು ಸಂತೋಷ್ ಕುಮಾರ್ ಮತ್ತು ರವಿಚಂದ್ರ ಬಾಳೆಮೂಲೆ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿರುವುದಿಲ್ಲ. ನಂತರ ಉರ್ವ ಸೆನ್ ಠಾಣೆಗೆ ಸಂತೋಷ್ ಕುಮಾರ್ ಬಂದಿದ್ದು, ಈಗ ಕರೆ ಮಾಡಿದರೆ ಯಾರೂ ಕರೆಯನ್ನು ಸ್ವೀಕರಿಸುವುದಿಲ್ಲ. ಅವರ ಫೋನ್ ಗಳು ಸ್ವಿಚ್ ಆಫ್ ಆಗಿವೆ. ಹೀಗಾಗಿ ಹಣ ಹಿಂಪಡೆಯುವ ಭರವಸೆ ಕಳೆದು ಹೋಗಿದೆ. ನಾವು ವಂಚನೆಗೊಳಗಾಗಿದ್ದೇವೆ ಎಂದು ಅನಿಸತೊಡಗಿದೆ. ಈ ವ್ಯವಹಾರದಿಂದ ನಮ್ಮ ಕಷ್ಟಪಟ್ಟು ಕೂಡಿಟ್ಟ ಹಣ ಕಳೆದುಕೊಂಡಿದ್ದು, ನಮ್ಮ ಜೀವನ ಕಷ್ಟಕರವಾಗಿದೆ. ನಮ್ಮ ರೀತಿಯಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ಸಾವಿರಾರು ಮಂದಿಯನ್ನು ಇವರು ವಂಚಿಸಿದ್ದಾರೆ. ಇದರಿಂದ ಆಘಾತಗೊಳಗಾದ ನಾವು ತುಳುನಾಡ್ ರಕ್ಷಣಾ ವೇದಿಕೆ ಕಚೇರಿಗೆ ತೆರಳಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರನ್ನು ಭೇಟಿ ಮಾಡಿ ಕೆನರಾ ಫಿಶ್ ಫಾರ್ಮರ್ಸ್ ವೆಲ್ಫೇರ್ ಪ್ರೊಡ್ಯೂಸರ್ ಕಂಪನಿ ಸೇರಿದಂತೆ ಮಂಗಳೂರು ಹಾಗೂ ಉಡುಪಿಯಲ್ಲಿ ವಿವಿಧ ಹೆಸರಿನಲ್ಲಿ ಅನಧಿಕೃತ ಮಾರ್ಕೆಟಿಂಗ್ ಕಂಪನಿಗಳು ಕಾರ್ಯಚರಿಸುತ್ತಿದ್ದು ಆರ್ ಬಿಐ ಅನುಮತಿ ಪಡೆಯದೆ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಸಂಸ್ಥೆಗಳಿದ್ದು, ಇಂತಹ ಸಂಸ್ಥೆಗಳನ್ನು ಮುಟ್ಟುಗೋಲು ಹಾಕಲು ಪ್ರತಿಭಟನಾ ಸಭೆ ಮತ್ತು ಧರಣಿ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳುವಂತೆ ಸಂತ್ರಸ್ತರು ಮನವಿ ಮಾಡಿದರು.
ಸಂತ್ರಸ್ತರ ಮನವಿಗೆ ಸ್ಪಂದಿಸಿದ ತುಳುನಾಡ ರಕ್ಷಣಾ ವೇದಿಕೆ ನಿಯೋಗವು ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತರು ಮತ್ತು ಕದ್ರಿ ಪೊಲೀಸ್ ಠಾಣೆ ಅಧಿಕಾರಿಗಳನ್ನು ಮನವಿ ಸಲ್ಲಿಸಿ ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ತಪ್ಪಿತಸ್ಥರ ಮೇಲೆ ಕೂಡಲೇ ಎಫ್ಐಆರ್ ದಾಖಲು ಮಾಡಿರುತ್ತಾರೆ. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತರು ಮತ್ತು ಕದ್ರಿ ಪೊಲೀಸ್ ಅಧಿಕಾರಿಗಳ ಕ್ರಮಕ್ಕೆ ಸಂತ್ರಸ್ತರು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.