
ಮಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ತಮ್ಮಿ ಅಧೀನದಲ್ಲಿರುವ ಪೊಲೀಸ್ ಸಿಬ್ಬಂದಿಯಿಂದ ಲಂಚ ತೆಗೆದುಕೊಳ್ಳಲು ಹೋಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.



ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್‌ನ ಪೊಲೀಸ್ ಇನ್‌ಸ್ಪೆಕ್ಟರ್ ಮಹಮ್ಮದ್ ಆರೀಸ್ ಅವರನ್ನು ಲೋಕಾಯುಕ್ತ ಪೊಲೀಸರು ಸಾಕ್ಷ್ಯ ಸಮೇತ ಬುಧವಾರ ಬಂಧಿಸಿದರು.
ಇವರು ಅತಿಥಿ ಗೃಹದಲ್ಲಿ ಕರ್ತವ್ಯ ನಿಯೋಜನೆ ಗೊತ್ತುಪಡಿಸಲು ಅಧೀನ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಒಬ್ಬರ ಬಳಿ ಮೊಹಮ್ಮದ್ ಆರೀಸ್ ಅವರು ₹20 ಸಾವಿರ ಹಣ ಹಾಗೂ ಪ್ರತಿ ತಿಂಗಳು ₹6 ಸಾವಿರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕಾನ್‌ಸ್ಟೆಬಲ್‌ನಿಂದ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್ ಇದುವರೆಗೆ ₹50 ಸಾವಿರದಷ್ಟು ಲಂಚವನ್ನು ಪಡೆದಿದ್ದರು.
ಕಾನ್‌ಸ್ಟೆಬಲ್ ಅವರ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರು ಮೂರು ತಿಂಗಳಿನಿಂದ ಲಂಚದ ಹಣವನ್ನು ನೀಡಿರಲಿಲ್ಲ. ಬಾಕಿ ಹಣವನ್ನು ನೀಡದಿದ್ದರೆ ಡ್ಯೂಟಿಯನ್ನು ಬದಲಾಯಿಸುತ್ತೇನೆ ಎಂದು ಮೊಹಮ್ಮದ್ ಆರಿಸ್ ತಿಳಿಸಿದ್ದರು. ಈ ಬಗ್ಗೆ ಕಾನ್‌ಸ್ಟೆಬಲ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ₹18 ಸಾವಿರ ಲಂಚದ ಹಣವನ್ನು ಮೊಹಮ್ಮದ್ ಆರೀಸ್ ಬುಧವಾರ ಪಡೆದಿದ್ದರು. ಆಗ ಅವರನ್ನು ಬಂಧಿಸಲಾಯಿತು’ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ನಟರಾಜ್ ತಿಳಿಸಿದ್ದಾರೆ.