ಬಂಟ್ವಾಳ: ವಿದ್ಯುತ್ ಶಾಕ್ ಹೊಡೆದು ಶಾಮಿಯಾನದ ಕೆಲಸಗಾರ ಮೃತ್ಯು

ಬಂಟ್ವಾಳ: ಶಾಮಿಯಾನದ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದ ಮರುದಿನವೇ ಶಾಮಿಯಾನದ ಕೆಲಸಗಾರನೋರ್ವ ವಿದ್ಯುತ್ ಶಾಕ್ ಗೆ ಬಲಿಯಾದ ದುರಂತ ಘಟನೆ ತಾಲೂಕಿನಲ್ಲಿ ನಡೆದಿದೆ.

ಲಾರಿಯೊಂದರಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ವಯರ್ ತಾಗಿ ನಾಲ್ವರು ಕೆಲಸಗಾರರಿಗೆ ಗಾಯವಾಗಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಕಡೇಶಿವಾಲಯ ಸಮೀಪ ಕೆಮ್ಮನ್ ಕಾಡಬೆಟ್ಟು ಎಂಬಲ್ಲಿ ಜು.20ರ ಶನಿವಾರ ಮಧ್ಯಾಹ್ನ ನಡೆದಿದೆ.

 

ಕಡೇಶಿವಾಲಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಕಲ್ಲಡ್ಕದ ಚಂದ್ರಶೇಖರ ಸಾಲಿಯನ್ ಅವರ ಮಾಲಿಕತ್ವದ ಸಾಲಿಯನ್ ಶಾಮಿಯಾನದ 5 ಜನ ಕೆಲಸಗಾರರಿಗೆ ವಿದ್ಯುತ್ ತಂತಿ ತಗುಲಿ ಕುಂದನ್ ಕುಮಾರ್ (20) ಮೃತಪಟ್ಟಿದ್ದು, ಬಾಕಿ 4 ಜನ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತ ಕುಂದನ್ ಕುಮಾರ್ ಮೂಲತ ಬಿಹಾರ ರಾಜ್ಯದ ನಿವಾಸಿ. 4 ಜನ ಗಾಯಾಳುಗಳ ಪೈಕಿ ಎರಡು ಜನ ಜಾರ್ಖಂಡ್, ಒಬ್ಬರು ಪಶ್ಚಿಮ ಬಂಗಾಳ ಹಾಗೂ ಇನ್ನೊಬ್ಬರು ಕಡೇಶಿವಾಲಯ ಗ್ರಾಮದ ಸ್ಥಳಿಯ ನಿವಾಸಿ.

ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply