ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಹೆಸರು ಮೂಡಿಸಿದೆ. 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಅವರು ಕಂಚು ಗೆದ್ದು ಸಂಭ್ರಮಿಸಿದ್ದಾರೆ.
ಕೊರಿಯಾ, ಚೀನಾ ಆಟಗಾರರ ಹೋರಾಟದ ನಡುವೆ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನಿಯಾದರು. 221.7 ಅಂಕ ಪಡೆದರು. ಕೊರಿಯಾದ ಇಬ್ಬರು ಮೊದಲೆರಡು ಸ್ಥಾನ ಪಡೆದರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣ ನಿರಾಸೆ ಅನುಭವಿಸಿದ್ದ ಮನು ಈ ಬಾರಿ ಪದಕಕ್ಕೆ ಗುರಿಯಿಟ್ಟು ಭಾರತದ ಧ್ವಜ ರಾರಾಜಿಸುವಂತೆ ಮಾಡಿದರು.
ಈ ಮೂಲಕ ಒಲಿಂಪಿಕ್ ಶೂಟಿಂಗ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ವನಿತಾ ಶೂಟರ್ ಎಂಬ ದಾಖಲೆಯನ್ನು 22ರ ಹರೆಯದ ಶೂಟರ್ ಬರೆದರು.ಈಗ ಕಳೆದ 20 ವರ್ಷಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ವನಿತಾ ಶೂಟರ್ ಆಗಿದ್ದರು. 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸುಮಾ ಶಿರೂರ್ ಕೊನೆಯ ಬಾರಿಗೆ ಫೈನಲ್ ತಲುಪಿದ್ದರು.