October 21, 2025
devadas-kapikad-kan-20240223171333-4099

ಮಂಗಳೂರು: ನಾನು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎಂದು ಪ್ರಸಿದ್ಧ ತುಳು ಕಲಾವಿದ ದೇವದಾಸ್ ಕಾಪಿಕಾಡ್ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದೆ.

‘ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ, ಯಾವುದೇ ಪಕ್ಷಕ್ಕೆ ನಾನು ಸೇರ್ಪಡೆಯಾಗಿಲ್ಲ, ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆ, ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ’ ಎಂಬ ಸ್ಪಷ್ಟನೆ ಆಡಿಯೋದಲ್ಲಿ ಇದೆ.

‘ಬಿಜೆಪಿ ನಾಯಕರು ಕರೆಮಾಡಿ ನಿಮ್ಮ ಮನೆಗೆ ಬರುತ್ತೇವೆ ಎಂದಾಗ ಬನ್ನಿ ಎಂದು ಹೇಳಿದ್ದೆ. ಕೇವಲ ಸೌಹಾರ್ದ ಭೇಟಿಗಾಗಿ ಮಾತ್ರ ಬನ್ನಿ, ಬೇರೆ ಯಾವುದೇ ತಪ್ಪು ಸಂದೇಶ ಹೋಗಬಾರದು ಅಂತ ನಾನು ಮೊದಲೇ ಬಿಜೆಪಿ ನಾಯಕರಿಗೆ ತಿಳಿಸಿದ್ದೆ, ಅದರಂತೆ ಡಿ.ವಿ ಸದಾನಂದ ಗೌಡ ಜೊತೆ ಕೆಲ ಬಿಜೆಪಿ ಮುಖಂಡರು ನನ್ನ ಮನೆಗೆ ಬಂದು ಭೇಟಿ ಮಾಡಿ ಹೋಗಿದ್ದಾರೆ. ಆದರೆ ಬಂದುಹೋದ ಮೇಲೆ ನಾನು ಬಿಜೆಪಿ ಸದಸ್ಯತ್ವ ಪಡೆದಿದ್ದೇನೆ ಎಂದು ಅದರಲ್ಲಿದ್ದ ಯಾರೋ ತಪ್ಪು ಸಂದೇಶ ನೀಡಿದ್ದಾರೆ, ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ಹೇಳಿದರು.

‘ನಾನೊಬ್ಬ ಕಲಾವಿದ, ಎಲ್ಲಾ ಜಾತಿ ಮತ ಧರ್ಮಗಳ ಜನರು ನನ್ನ ಅಭಿಮಾನಿಗಳಾಗಿದ್ದು ನನ್ನನ್ನು ಪ್ರೀತಿ ಮಾಡುತ್ತಾರೆ, ನನಗೆ ಯಾವ ಪಕ್ಷವೂ ಬೇಕಿಲ್ಲ, ಎಲ್ಲಾ ಪಕ್ಷಗಳ ನಾಯಕರ ಜೊತೆಗೂ ನನಗೆ ಭಾಂದವ್ಯ ಇದೆ, ರಮಾನಾಥ ರೈ, ಯು.ಟಿ ಖಾದರ್, ನಳಿನ್ ಕುಮಾರ್ ಕಟೀಲ್ ನನಗೆ ಒಳ್ಳೆಯ ಸ್ನೇಹಿತರು’ ಎಂದಿದ್ದಾರೆ. ನನ್ನ ಮನೆಗೆ ಯಾವ ಪಕ್ಷದ ನಾಯಕರು ಬಂದರೂ ಸ್ವಾಗತಿಸಿ ಆತಿಥ್ಯ ನೀಡಿ ಫೋಟೋ ತೆಗಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಮಾಹಿತಿ ನೀಡಿತ್ತು. ಬಿಜೆಪಿ ನಾಯಕರು ದೇವದಾಸ್ ಕಾಪಿಕಾಡ್ ಅವರನ್ನು ಭೇಟಿಯಾಗಿರುವ ಫೋಟೋ ಸಮೇತ ಪೋಸ್ಟ್ ಮಾಡಿದ್ದರು. ಆ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಬಾಯ್ಕಟ್ ದೇವದಾಸ್ ಕಾಪಿಕಾಡ್ ಅಭಿಯಾನ ನಡೆಯುತ್ತಿರುವುದು ಕಂಡುಬಂದಿದೆ. ಅದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಅವರಿಂದ ಸ್ಪಷ್ಟನೆ ಹೊರಬಂದಿದೆ.

About The Author

Leave a Reply