ಮಂಗಳೂರು: ನಗರದ ಹೊರವಲಯದ ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಶುಕ್ರವಾರ ದಾಳಿ ನಡೆಸಿ 3 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಂದಾಯ, ಗಣಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನೇತ್ರಾವತಿ ನದಿ ತೀರದ ವಳಚ್ಚಿಲ್, ಮಾರಿಪಳ್ಳ, ಪುದು ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 23 ಬೋಟುಗಳನ್ನು ವಶಪಡಿಸಿದೆ. ಬೋಟುಗಳ ಒಟ್ಟು ಅಂದಾಜು ಮೌಲ್ಯ 46 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬೋಟುಗಳನ್ನು ಸದ್ಯ ಅಡ್ಯಾರ್ ಕಟ್ಟೆ ಸಮೀಪ ತಂದಿಡಲಾಗಿದೆ. ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿ ಕಾರ್ಯಾಚರಣೆಯಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಗಿರೀಶ್ ಮೋಹನ್, ಕೃಷ್ಣವೇಣಿ, ಮಹದೇಶ್ವರ್, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.