Visitors have accessed this post 767 times.

ಆರ್ ಸಿಬಿ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಇನ್ಮುಂದೆ ಪೊಲೀಸ್ ಅಧಿಕಾರಿ!

Visitors have accessed this post 767 times.

ಹೈದರಾಬಾದ್​: ಮೈದಾನದಲ್ಲಿ ತಮ್ಮ ವೇಗದ ಬೌಲಿಂಗ್​ನಿಂದ ಎದುರಾಳಿ ಬ್ಯಾಟ್ಸ್​ಮನ್​ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಪೊಲೀಸ್ ಅಧಿಕಾರಿಯಾಗಿ ಸಮಾಜಘಾತುಕರನ್ನು ಸೆದೆಬಡಿಯಲು ಮುಂದಾಗಿದ್ದಾರೆ. ಹೌದು, ಸಿರಾಜ್​ ಅವರು ತೆಲಂಗಾಣದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ನಿನ್ನೆ ಡಿಜಿಪಿ ಕಚೇರಿಗೆ ತೆರಳಿದ ಸಿರಾಜ್​, ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಹಾಗೂ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸಿರಾಜ್ ಅವರೊಂದಿಗೆ ಸಂಸದರಾದ ಅನಿಲ್ ಕುಮಾರ್ ಯಾದವ್ ಮತ್ತು ಮೊಹಮ್ಮದ್ ಫಹೀಮುದ್ದೀನ್ ಕೂಡ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅಂದಹಾಗೆ ಸಿರಾಜ್ ಅವರಿಗೆ ಗ್ರೂಪ್ 1 ಸರ್ಕಾರಿ ಸ್ಥಾನಮಾನ ನೀಡುವುದಾಗಿ ಈ ಹಿಂದೆಯೇ ತೆಲಂಗಾಣ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ತೆಲಂಗಾಣ ಪೊಲೀಸರು ಎಕ್ಸ್​ ಖಾತೆಯ ಮೂಲಕ ಮಾಹಿತಿ ನೀಡಿದ್ದು, ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣದ ಡಿಎಸ್​ಪಿ ಆಗಿ ನೇಮಿಸಲಾಗಿದ್ದು, ಅವರ ಕ್ರಿಕೆಟ್ ಸಾಧನೆಗಳನ್ನು ಗೌರವಿಸಲಾಗಿದೆ. ಸಿರಾಜ್​ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರೆಸುತ್ತಾರೆ ಮತ್ತು ತಮ್ಮ ಹೊಸ ಪಾತ್ರದಲ್ಲಿ ಅನೇಕರನ್ನು ಪ್ರೇರೇಪಿಸುತ್ತಾರೆ ಎಂದು ಪೊಲೀಸರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡಿಎಸ್​ಪಿಯಾಗಿ ನೇಮಕವಾಗಿರುವ ಸಿರಾಜ್​ ಅವರು ತಿಂಗಳಿಗೆ 1,37,050 ರೂ. ಸಂಬಳ ಪಡೆಯಲಿದ್ದಾರೆ. ಇದರ ಹೊರತಾಗಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿನ ಸಾಧನೆಯ ನಂತರ ತೆಲಂಗಾಣ ಸರ್ಕಾರವು ಸಿರಾಜ್​ ಅವರಿಗೆ ಜುಬಿಲಿ ಹಿಲ್ಸ್‌ನಲ್ಲಿ 600 ಚದರ ಅಡಿಯ ಭೂಮಿಯನ್ನು ಮಂಜೂರು ಮಾಡಿದೆ.  ಸಿರಾಜ್ ಟಿ20 ವಿಶ್ವಕಪ್ 2024 ವಿಜೇತ ತಂಡದ ಸದಸ್ಯರಾಗಿದ್ದರು. ಟೀಮ್​ ಇಂಡಿಯಾಗೆ ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನದಲ್ಲಿ ಸಿರಾಜ್​ಗೆ 5 ಕೋಟಿ ರೂ. ಸಿಕ್ಕಿದೆ. ಸಿರಾಜ್​ ಅವರು ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ವೇಗಿ ಕೂಡ ಹೌದು. ಆರ್​ಸಿಬಿ ಪರ ಆಡುವ ಅವರಿಗೆ ಒಂದು ಸೀಸನ್‌ಗೆ 7 ಕೋಟಿ ಸಂಭಾವನೆ ನೀಡಲಾಗುತ್ತದೆ. ಇನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯಲ್ಲಿದ್ದು, ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *