ಮಂಗಳೂರು : ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ 20 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ
ಮಂಗಳೂರು : ಜೆ.ಪಿ. ಮಾರ್ಗನ್ ಕಂಪೆನಿಯ ಪ್ರತಿನಿಧಿ ಎಂದು ತನ್ನನ್ನು ಪರಿಚಯಿಸಿಕೊಂಡು ಭಾರತದಲ್ಲಿ ಹೊಸದಾಗಿ ಕಂಪೆನಿಯನ್ನು ಪ್ರಾರಂಭಿಸುತ್ತಿದ್ದು, ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ 20 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಸೆ. 24ರಂದು ಅಪರಿಚಿತ ವ್ಯಕ್ತಿಯೋರ್ವ ತಾನು ವಿಶ್ವನಾಥನ್ ಮುಖ್ಯ ಹೂಡಿಕೆದಾರ ಸ್ಟ್ರ‍್ಯಾಟಜಿಸ್ಟ್ ಎಂದು ಹೇಳಿಕೊಂಡು ಸಂಪರ್ಕ ಮಾಡಿದ್ದಾನೆ. ನಂತರ ನೀತಾ ಶರ್ಮಾ ಎಂಬಾಕೆ ಜೆ.ಪಿ. ಮಾರ್ಗನ್ ಎಂಬ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ನಂಬರ್‌ಗಳಿಂದ ಕರೆ ಮಾಡಿ ಸಂಪರ್ಕಿಸಿದ್ದಾರೆ. ಕಂಪೆನಿ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿ ಲಿಂಕ್ ಕಳುಹಿಸಿ, 20 ಲಕ್ಷ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ದೂರುದಾರರು ಅ. 14ರಂದು 20 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಷೇರುಗಳನ್ನು ಖರೀದಿಸುವಂತೆ ಹೇಳಿದ್ದು, 1 ಷೇರಿಗೆ 240 ರೂ.ನಂತೆ 1 ಸಾವಿರ ಷೇರುಗಳನ್ನು ಖರೀದಿ ಮಾಡಿದ್ದಾರೆ.ಅ. 15ರಂದು ಇನ್ನೊಂದು ಸಂಸ್ಥೆಯ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, ಅದರಂತೆ ದೂರುದಾರರು 250.95 ರೂ.ನಂತೆ 7,900 ಷೇರುಗಳನ್ನು ಖರೀದಿ ಮಾಡಿದ್ದಾರೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ವಿದ್‌ಡ್ರಾ ಮಾಡುವಂತೆ ತಿಳಿಸಿದ್ದು, 1,500 ರೂ. ಹಿಂಪಡೆದಿದ್ದಾರೆ. ಆದರೆ ಆ ಹಣವು ಬೇರೊಂದು ಖಾತೆಯಿಂದ ಬಂದಿದ್ದು, ಇದರಿಂದ ಸಂಶಯಗೊಂಡ ದೂರುದಾರರು ನೀತಾ ಶರ್ಮಾ ಅವರಲ್ಲಿ ಕೇಳಿದಾಗ ಸರಿಯಾದ ಉತ್ತರ ನೀಡಿಲ್ಲ.ಬಳಿಕ ದೂರುದಾರರು ತಾನು ಹೂಡಿಕೆ ಮಾಡಿದ ಎಲ್ಲ ಹಣವನ್ನು ವಾಪಸ್ ನೀಡುವಂತೆ ನೀತಾ ಶರ್ಮಾ ಅವರಲ್ಲಿ ಕೇಳಿದ್ದಾರೆ. ಈ ವೇಳೆ ನೀತಾ ಶರ್ಮಾ 4 ಲಕ್ಷ ರೂ. ಹೆಚ್ಚುವರಿಯಾಗಿ ಕೇಳಿದ್ದಾರೆ. ಆಗ ತಾನು ಮೋಸ ಹೋಗಿರುವುದು ಅರಿವಾಗಿದೆ. ಹೂಡಿಕೆ ಮಾಡುವಂತೆ ಹೇಳಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.